ಶನಿವಾರ, ಅಕ್ಟೋಬರ್ 28, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 41

ಉಡುಪರು ಮದುವೆಯಾಗಿ ರೂಮು ಬಿಟ್ಟು ಬೇರೆ ಮನೆಮಾಡಿದರು. ಜೊತೆಯಲ್ಲಿದ್ದ ಸುರೇಶ ಭಟ್ರು ಓದಿ ಮುಗಿದಿದ್ದು ಅವರ ಮನೆಗೆ ಹೊರಟರು. ನಾನು ಒಬ್ಬಂಟಿಯಾದೆ.  ಒಂದೋ ನಾನು ಬೇರೆ ಯಾರನ್ನಾದರೂ ಸೇರಿಸಿಕೊಳ್ಳ ಬೇಕಿತ್ತು. ಅಥವ ನಾನು ಒಬ್ಬನೇ ಇರಬಹುದಾದ ಬೇರೆಯೇ ಆದ ರೂಮನ್ನು ಹುಡುಕಿಕೊಳ್ಳಬೇಕಾಗಿತ್ತು. ನಮ್ಮ ಸುಗುಣ ಪ್ರೆಸ್ ನ ಸುಬ್ರಾಯರಿಗೆ ಆಸುಪಾಸಿನ ಎಲ್ಲರ ಗುರುತು ಪರಿಚಯ ಇದ್ದುದರಿಂದ ಅವರ ಸಹಾಯದಿಂದ ನಾನು ನನ್ನ ರೂಮನ್ನು ಬದಲಾಯಿಸಿ, ಕನಕದಾಸ ರಸ್ತೆಯಲ್ಲಿ ರಾಜಗೋಪಾಲ ರಾವ್ ಎನ್ನುವ ಕ್ರಿಶ್ಚನ್ ಶಾಲೆಯ ಅಧ್ಯಾಪಕರೊಬ್ಬರ ಮನೆಯ ಹತ್ತಿರದಲ್ಲಿಯೇ ಇರುವ ಅವರದೇ ಬಾಡಿಗೆ ರೂಮನ್ನು ಸೇರಿದೆ. ಅವರೂ ಬಹಳ ಒಳ್ಳೆಯವರು.

ಆಗ ಕೃಷ್ಣಮೂರ್ತಿ ಹೊಳ್ಳರು ಮತ್ತು ನಾನೂ ಒಂದೇ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಪತ್ನಿ ಜಯಲಕ್ಷ್ಮಿ ಎಂಬವರೂ ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಕಾಲೇಜಿನಲ್ಲಿ ಓದುತ್ತಿರುವಾಗ ಕೊಡ್ಗಿ ಕಂಪೌಂಡ್ ನ ಹತ್ತಿರವೇ ಅವರೂ ಇದ್ದಿದ್ದರು. ಆಗಿನ ಪರಿಚಯದ ಸಲಿಗೆಯಿಂದ ನಾನು ಒಬ್ಬನೇ ಇದ್ದು ಅಡುಗೆ ಮಾಡಿಕೊಳ್ಳುವುದನ್ನು ತಿಳಿದು, ಅವರ ಮನೆಗೆ ಪ್ರತೀದಿನ ಊಟಕ್ಕೆ ಬರಬೇಕೆಂದು ಒತ್ತಾಯಿಸಿದರು. ನಾನು “ನಿಮಗೆಲ್ಲ ತೊಂದರೆ ಯಾಕೆ? ಎಂದರೂ “ನಾವು ನಿನಗೇನು ಸ್ಪೆಷಲ್ ಮಾಡುವುದಿಲ್ಲ. ಮಾಡಿದ್ದೇ ಹಾಕುವುದು ಬಾ” ಎಂದು ಹೇಳಿದರು. ನನಗೂ ಅಡುಗೆ ಮಾಡುವುದು ಅಷ್ಟೇನೂ ಕಷ್ಟವಲ್ಲದಿದ್ದರೂ, ಪಾತ್ರೆ ತೊಳೆಯುವುದು ಅಂದರೆ ಸ್ವಲ್ಪ ಅಲರ್ಜಿ. ಕೆಲವೊಮ್ಮೆ ಎರಡು ಮೂರು ದಿನಗಳ ಪಾತ್ರೆಗಳನ್ನು ಒಟ್ಟಿಗೇ ತೊಳೆದದ್ದೂ ಉಂಟು. ಆದ್ದರಿಂದ ಅವರ ಈ ಸಲಹೆ ನನಗೆ ಸಮ್ಮತವಾಗಿ, ನಾನು ಆರೂರು ಕಂಪೌಂಡ್ ನಲ್ಲಿರುವ ಅವರ ಮನೆಗೆ ಪ್ರತೀ ದಿನ ಬೆಳಿಗ್ಗೆ, ಮಧ್ಯಾಹ್ನ ರಾತ್ರಿ ಹೋಗತೊಡಗಿದೆ.

ನಮ್ಮ ಆಫೀಸಿನ ಹಿಂದುಗಡೆಯೇ ಅವರ ಮನೆ ಇರುವುದು. ಅಲ್ಲಿ ಹಲವಾರು ಬಾಡಿಗೆ ರೂಮುಗಳು, ಮನೆಗಳೂ ಇದ್ದವು. ಆದರೆ ನಮ್ಮ ಅಫೀಸಿನಿಂದ ಅಲ್ಲಿಗೆ ಹೋಗಬೇಕಾದರೆ ಮಾತ್ರಾ ಮಧ್ಯದಲ್ಲಿ ದೊಡ್ಡ ಕಂಪೌಂಡ್ ಇದ್ದುದರಿಂದ, ಆಯಾತಾಕಾರವಾಗಿ  ಒಂದು ಸುತ್ತು ಹಾಕಿಯೇ ಹೋಗಬೇಕು. ಒಂದು ದಿನ ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಅವರ ಮನೆಯ ಕಡೆಗೆ ಆಕಸ್ಮಿಕವಾಗಿ ನೋಡಿದಾಗ ಮಹಡಿಯ ಕಿಟಕಿಯಿಂದ ಕಪ್ಪಗೆ ಹೊಗೆ ಹೋಗುವುದು ಕಾಣುತ್ತಿತ್ತು. ಅದನ್ನು ನೋಡಿದ ನಾನು ಹತ್ತಿರ ಕುಳಿತವರಿಗೆ ತೋರಿಸಿದೆ. ಆಮೇಲೆ ಒಬ್ಬೊಬ್ಬರಾಗಿ ನೋಡಿ, ಹೊಳ್ಳರಿಗೂ ಹೇಳಿದ್ದಾಯಿತು. ಅವರು “ಏನಾಯಿತಪ್ಪಾ?” ಎಂದು ಗಾಬರಿಯಾದರು. ಯಾರೋ ಒಬ್ಬರು “ಹೋ ಅಲ್ಲಿ ಏನೋ ಬೆಂಕಿಹಿಡಿದು, ಏನೋ ಸುಟ್ಟು ಹೋಗುತ್ತಿದೆ. ಹೋಗಿ ನೋಡುವ” ಎಂದಾಗ ಒಂದೇ ಕ್ಷಣಕ್ಕೆ ನಾವೆಲ್ಲ ಹೊಳ್ಳರ ಮನೆಯ ಹತ್ತಿರ ಓಡಿದೆವು.  ಆ ಹೊಳ್ಳರ ಮನೆಯ ಮಹಡಿ ಮೇಲಿನ ಬಾಡಿಗೆ ರೂಮಿನಲ್ಲಿ ಶಂಕರನಾರಾಯಣದವರಾದ, ನನ್ನ ಸ್ನೇಹಿತರೂ ಆದ, ಉಡುಪಿ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಕುಮಾರ ಉಡುಪ ಎಂಬವರಿದ್ದರು. ಅವರ ರೂಮಿನ ಕಿಟಕಿಯಿಂದ ಕಪ್ಪು ನಾಲಿಗೆಯಂತೆ ದಟ್ಟವಾದ ಹೊಗೆಯು, ಹೊರಕ್ಕೆ ಚಾಚಿ ಸಣ್ಣ ಸಣ್ಣ ಬೆಂಕಿಯ ಕಿಡಿಗಳೊಂದಿಗೆ ಮೇಲಕ್ಕೆ ಹಾರುತ್ತಿತ್ತು.

ನಮ್ಮಲ್ಲಿಯೇ ಒಬ್ಬರು, ತಡಮಾಡದೇ ಮೇಲೆ ಓಡಿ ಹೋಗಿ ಆ ರೂಮಿನ ಬಾಗಿಲನ್ನು ದೂಡಿ ಒಡೆದರು. ಒಳಗೆ ನೋಡುವಾಗ ರೂಮಿನಲ್ಲಿ ಇದ್ದ ಹಾಸಿಗೆ, ಪುಸ್ತಕಗಳು, ಬಟ್ಟೆಗಳು ಎಲ್ಲ ಒಂದೊಂದೇ ಅಗ್ನಿಗೆ ಆಹುತಿಯಾಗುತ್ತಿದ್ದವು. ಅಷ್ಟರಲ್ಲಿ ಗಲಾಟೆ ಬಿದ್ದು ಬಾವಿಯಿಂದ ನೀರು ತಂದು ಒಬ್ಬರು ಅದರ ಮೇಲೆ ಹೊಯ್ದಾಯಿತು. ಕುಮಾರರಿಗೆ ಸುದ್ದಿ ಹೋಗಿ,ಅವರು  ಮನೆಗೆ ಬರುವಾಗ, ಏನು ನೋಡುವುದು?  ಮನೆಯ ಸಾಮಾನುಗಳೆಲ್ಲಾ ಅರ್ಧಕ್ಕರ್ದ ಸುಟ್ಟು ಕರಟಿ ವಾಸನೆ ಬರುತ್ತಿದ್ದರೆ, ಉಳಿದದ್ದು ನೀರಿನಿಂದ ಒದ್ದೆಯಾಗಿತ್ತು. ಅದನ್ನು ಕಂಡು ಮಂಕಾಗಿದ್ದ ಅವರನ್ನು ಎಲ್ಲರೂ ಸಮಾಧಾನ ಮಾಡಿದರು. ಕೊನೆಗೆ ನೋಡುವಾಗ ಆದದ್ದೇನು ಅಂದರೆ, ಅವರು ಬೆಳಿಗ್ಗೆ ದೇವರ ಪೋಟೋ ಒಂದಕ್ಕೆ ಪೂಜೆ ಮಾಡಿ, ಊದಿನ ಕಡ್ಡಿಯನ್ನು ಹಚ್ಚಿ ಬ್ಯಾಂಕಿಗೆ ಹೋಗಿದ್ದರು. ಗಾಳಿಗೆ ಅದರ ಕಿಡಿಯೊಂದು ಅಲ್ಲಿಯೇ ಕೆಳಗಡೆಯಿದ್ದ ಅವರ ಹಾಸಿಗೆಯ ಮೇಲೆ ಬಿದ್ದಿತ್ತು. ಹತ್ತಿಯ ಹಾಸಿಗೆ. ಒಳಗಿಂದೊಳಗೆ ಅದರಲ್ಲಿದ್ದ ಹತ್ತಿಯು ಸುಟ್ಟು ನಿಧಾನವಾಗಿ ವ್ಯಾಪಿಸುತ್ತಾ, ದೊಡ್ಡದಾಗಿ ಹತ್ತಿಕೊಂಡು ಉರಿದು, ರೂಮಿನ ಒಂದೊಂದೇ ಸಾಮಾನುಗಳನ್ನು ಆಹುತಿ ತೆಗೆದುಕೊಳ್ಳುತ್ತಾ ಹೋಯಿತು. ಹಗಲಿನಲ್ಲಿ ಅಲ್ಲಿದ್ದವರೆಲ್ಲಾ ಅವರವರ ಕೆಲಸಕ್ಕೋ, ಕಾಲೇಜಿಗೋ ಹೋಗಿದ್ದುದರಿಂದ ಆಗ ಅಲ್ಲಿ ಆಸುಪಾಸಿನಲ್ಲಿ ಯಾರೂ ಇರಲಿಲ್ಲ. ನಮಗೆ ಆಫೀಸಿನಲ್ಲಿದ್ದವರಿಗೆ ಹೊಗೆ ಕಾಣಿಸಿ, ಅದು ಗೊತ್ತಾದ್ದರಿಂದ ಅಷ್ಟಾದರೂ ಉಳಿಯಿತು.

ಹೊಳ್ಳರ ಅಕ್ಕ, ನಾವೆಲ್ಲ ಅವರನ್ನು ಬಾಬ್ಲಿಯಕ್ಕ ಎಂದು ಕರೆಯುತ್ತಿದ್ದೆವು, ನಮಗೆ ಪ್ರೀತಿಯಿಂದ ಬಡಿಸುತ್ತಿದ್ದರು. ಹೊಳ್ಳರ ಮಕ್ಕಳೂ ನನ್ನನ್ನು ಅಣ್ಣ ಅಣ್ಣ ಎಂದು ಕರೆದು, ನಾನು ಅವರ ಅಣ್ಣನೇ ಆಗಿಬಿಟ್ಟಿದ್ದೆ. ಹೊಳ್ಳರ ಹೆಂಡತಿ ಜಯಲಕ್ಷ್ಮಿಯವರಿಗೂ ನಾನೆಂದರೆ ಅಷ್ಟು ಪ್ರೀತಿ. ನಾನು ಅವರ ತಮ್ಮ ಎಂದು ಎಲ್ಲರ ಹತ್ತಿರ ಹೇಳುತ್ತಿದ್ದರು.

ಮುಂದೆ ಹೊಳ್ಳರಿಗೆ ಕಣ್ಣು ಸಮಸ್ಯೆಯಿಂದಾಗಿ ಕೆಲಸ ಮಾಡಲು ಸಾಧ್ಯವಾಗದೇ ಸ್ವಯಂ ನಿವೃತ್ತಿ ಪಡೆದುಕೊಳ್ಳಬೇಕಾಯಿತು. ಅವರು ಮನೆಯಲ್ಲಿ ಇದ್ದಾಗಲೂ ನಾನು ಅವರ ಮನೆಗೇ ಊಟಕ್ಕೆ ಕಾಫಿ ತಿಂಡಿಗೆ ಹೋಗುತ್ತಿದ್ದೆ. ಆಫೀಸಿನ ಹಲವಾರು ಸಮಸ್ಯೆಗಳು, ಪತ್ರ ವ್ಯವಹಾರಗಳ ಬಗ್ಗೆಯೂ ಅನುಭವಿಗಳಾದ ಅವರ ಹತ್ತಿರ ಚರ್ಚಿಸಿ ಅವರ ಸಲಹೆ ಕೇಳುವುದಿತ್ತು. ಒಮ್ಮೆ ಅವರಿಗೆ ಹಠಾತ್ ಕಾಯಿಲೆಯಾಗಿ, ಕಲ್ಸಂಕದ ಬಳಿ ಇರುವ ಒಂದು ಕ್ಲಿನಿಕ್ ಗೆ ಒಳರೋಗಿಯಾಗಿ ಸೇರಿದರು. ನಾನು ಅವರ  ಬಳಿ ಕೆಲವು ದಿನ ರಾತ್ರಿಯೂ ಇದ್ದಿದ್ದೆ. ಅವರಿಗೆ ತುರ್ತಾಗಿ ಒಮ್ಮೆ ರಕ್ತ ಬೇಕಾಯಿತು. ನಾನು ಒಂದು ಸಲ ಕೊಟ್ಟಾಯಿತು. ಮತ್ತೆ ಪುನಹ ಬೇಕಾದಾಗ ಉಡುಪಿಯಲ್ಲಿ ಸಿಗದೇ ಮಣಿಪಾಲ ಆಸ್ಪತ್ರೆ ಯ ಬ್ಲಡ್ ಬ್ಯಾಂಕಿನಲ್ಲಿ ಸಿಗುತ್ತದೆ ತನ್ನಿ ಎಂದು ಆ ಕ್ಲಿನಿಕ್ ನ ಡಾಕ್ಟರ್ ರು ಮಣಿಪಾಲದ ಆಸ್ಪತ್ರೆಯಲ್ಲಿಯ ಸಂಬಂಧಿಸಿದವರಿಗೆ ಒಂದು ಪತ್ರ ಬರೆದು ಕೊಟ್ಟರು. ನಾನು ಜಯಲಕ್ಶ್ಮಿಯವರೊಂದಿಗೆ ಅದನ್ನು ತೆಗೆದುಕೊಂಡು ಮಣಿಪಾಲಕ್ಕೆ ಹೋಗಿ ಬ್ಲಡ್ ಬ್ಯಾಂಕ್ ನಲ್ಲಿ ತೋರಿಸಿದೆ. ಅವರು ಕೊಟ್ಟ ರಕ್ತದ ಪ್ಯಾಕೆಟ್ ನ ಮೇಲಿನ ಚೀಟಿಯನ್ನು ನೋಡಿ, ನನಗೆ ಅನುಮಾನವಾಯಿತು. ಹೊಳ್ಳರದ್ದು ಒ ಪಾಸಿಟಿವ್ ಎಂದು ನನಗೆ ಚೆನ್ನಾಗಿ ಗೊತ್ತಿತ್ತು. ಆದರೆ ಅವರು ಒ ನೆಗೆಟಿವ್ ರಕ್ತವನ್ನು ಕೊಟ್ಟಿದ್ದರು. ನಾನು “ಇದು ತಪ್ಪಾಗಿದೆ ನಮಗೆ ಬೇಕಾದದ್ದು, ಒ ಪಾಸಿಟಿವ್ ರಕ್ತ” ಎಂದೆ. ಅವರು ಮತ್ತೊಮ್ಮೆ ನಮ್ಮ ಡಾಕ್ಟರ್ ಬರೆದು ಕೊಟ್ಟ ಪತ್ರವನ್ನು ನೋಡಿ “ಇಲ್ಲ. ಇಲ್ಲಿ ನೋಡಿ. ನಾವು ನಿಮ್ಮ ಡಾಕ್ಟರು ಬರೆದದ್ದನ್ನೇ ಕೊಟ್ಟಿದ್ದೇವೆ” ಅಂದರು.

ನನಗೆ ಎಲ್ಲೋ ತಪ್ಪಾಗಿದೆ ಎಂದು ದೃಢವಾಯಿತು. ಆದ್ದರಿಂದ ಅದನ್ನು ಸುಮ್ಮನೇ ಬಿಡುವ ಹಾಗಿರಲಿಲ್ಲ. ಅಲ್ಲಿಯೇ ನಾನು ಜಯಲಕ್ಷ್ಮಿಯವರಿಗೆ ಅದನ್ನು ಹೇಳಿ ಆ ರಕ್ತವನ್ನು ತೆಗೆದುಕೊಳ್ಳದೆ ವಾಪಾಸು ಬಂದು, ಕೂಡಲೇ ಆಸ್ಪತ್ರೆಗೆ ಹೋಗಿ ಡಾಕ್ಟರನ್ನು ಕಂಡು ಪತ್ರದಲ್ಲಿ ತಪ್ಪಾಗಿರುವುದನ್ನು ಅವರ ಗಮನಕ್ಕೆ ತಂದೆ. ಅವರು ಕೂಡಲೇ ಸರಿಪಡಿಸಿ ಕೊಟ್ಟರು. ನಾನು ಪುನಹ ಮಣಿಪಾಲಕ್ಕೆ ಹೋಗಿ ಪತ್ರವನ್ನು ತೋರಿಸಿದೆ. ಅಲ್ಲಿಯ ಡಾಕ್ಟರರು “ಎಂತಹಾ ಕೆಲಸ ವಾಗುತ್ತಿತ್ತು? ನೀವು ನೋಡಿದ್ದಕ್ಕೆ ಆಯಿತು” ಅಂದರು. ಕೊನೆಗೆ ಅದನ್ನು ಬದಲಾಯಿಸಿ ಒ ಪಾಸಿಟಿವ್ ರಕ್ತವನ್ನೇ ಕೊಟ್ಟರು. ಒಂದು ವೇಳೆ ಅವರು ಕೊಟ್ಟ ರಕ್ತವನ್ನೇ ತಂದು, ಹೊಳ್ಳರಿಗೆ ಕೊಟ್ಟಿದ್ದರೆ ಅವರು ಬದುಕುತ್ತಿರಲಿಲ್ಲ. ಡಾಕ್ಟರ್ ರ ಒಂದು ಅಜಾಗ್ರತೆಯಿಂದ ಹಾಗಾಗಿತ್ತು. ಹೊಳ್ಳರು ಮತ್ತೆ ಗುಣವಾಗಿ ಮನೆಗೆ ಬಂದರು. ಆದರೆ ಅವರು ಬದುಕಿರುವವರೆಗೂ “ನೀನೆ ನನ್ನನ್ನು ಬದುಕಿಸಿದವನು” ಎಂದು ಆ ಘಟನೆಯನ್ನು ಸ್ಮರಿಸಿಕೊಳ್ಳುತ್ತಿದ್ದರು. ಅವರು ಪ್ರೀತಿಯಿಂದ ಅಷ್ಟು ದಿನ ಅನ್ನ ಹಾಕಿದ್ದಕ್ಕೆ, ನನ್ನ ಒಂದು ಋಣ ಹಾಗೆ ಸಂದಾಯವಾಯಿತು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ