ಗುರುವಾರ, ಅಕ್ಟೋಬರ್ 19, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 32

ಹಾಲಾಡಿ ಪೇಟೆಗೆ ಹೋಗಿದ್ದಾಗ ಒಮ್ಮೆ ರಾಮಣ್ಣ ಶೆಟ್ರು ಎಂಬವರು ಸಿಕ್ಕಿದರು. “ಈಗ ಎಲ್ಲಿದ್ದೀರಿ? ಏನು ಮಾಡುತ್ತಿದ್ದೀರಿ?” ಎಂದು ಮಾತಿಗೆ ತೊಡಗಿದ ಅವರು, ಆ ವರ್ಷ ಹಾಲಾಡಿ ಮರ್ಲಚಿಕ್ಕು ದೇವಸ್ಥಾನದ ಆಡಳಿತ ಮುಕ್ತೇಸರರಾಗಿದ್ದರೆಂದೂ, ಹಾಲಾಡಿ ಮೇಳವನ್ನು ವಹಿಸಿಕೊಂಡಿದ್ದೇನೆಂದು ಹೇಳಿದರು. ಹಾಗೆ ಮಾತಾಡುತ್ತಾ, “ಉಪ್ಪೂರ್ರೆ, ನಂಗೊಂದು ಒಳ್ಳೆ ಹೊಸ ಪ್ರಸಂಗ ಬರ್ದು ಕೊಡಿ ಕಾಂಬ. ಒಳ್ಳೆ ರೈಸಕ್ ಕಾಣಿ” ಅಂದರು. ನಾನು, “ನಾವು ಬರ್ದದ್ದೆಲ್ಲ ಈಗಿನ ಕಲಾವಿದರಿಗೆ, ಪ್ರೇಕ್ಷಕರಿಗೆ ಆತಿಲ್ಲೆ ಮರ್ರೆ” ಅಂದರೂ ಬಿಡಲಿಲ್ಲ. ಒತ್ತಾಯಿಸಿದರು. ಮಾರ್ವಿ ವಾದಿರಾಜ ಹೆಬ್ಬಾರರು ಬರೆದು ಕೊಟ್ಟ “ಹಾಲಾಡಿ ಕ್ಷೇತ್ರ ಮಹಾತ್ಮೆ” ಪ್ರಸಂಗ, ಯಶಸ್ವಿಯಾಗಿ ಆಡುತ್ತಿದ್ದಾರೆ ಎಂದೂ. ಹೋದಲ್ಲೆಲ್ಲಾ ಹರಕೆ ಬಯಲಾಟಕ್ಕೆ ಅದೇ ಪ್ರಸಂಗವಾಗುತ್ತಿದೆ ಎಂದೂ ಹೊಗಳಿದರು. ಸರಿ ನಾನು ನೋಡುವ ಎಂದು ಹೇಳಿ, ಮನೆಗೆ ಬಂದವನೇ, ಒಂದು ಕಾಲ್ಪನಿಕ ಕತೆಯನ್ನು ಹೆಣೆದು, ಅದರಲ್ಲಿ ಬರುವ ಪಾತ್ರಗಳಿಗೆಲ್ಲಾ ಯಕ್ಷಗಾನದ ರಾಗಗಳ ಹೆಸರನ್ನು ಇಟ್ಟು, ಪದ್ಯ ಬರೆಯಲು ಶುರುಮಾಡಿದೆ. ಕತೆಯಲ್ಲಿ ಕುತೂಹಲದ, ಸ್ವಾರಸ್ಯಕರವಾದ ಆಂಶಗಳಿಗೇನೂ ಕೊರತೆ ಇರಲಿಲ್ಲ. ಅಂತೂ ಒಂದು ಹದಿನೈದು ದಿನಗಳಲ್ಲಿ  ನನ್ನ “ಮೋಹನ ಕಲ್ಯಾಣಿ “ ಎಂಬ ಪ್ರಸಂಗ ಸಿದ್ಧವಾಯಿತು. ಅದರ ಮೂರು ಪ್ರತಿ ಮಾಡಿ, ಎರಡು ಪ್ರತಿಯನ್ನು ಹಾಲಾಡಿಗೆ ಹೋಗಿ ರಾಮಣ್ಣ ಶೆಟ್ರನ್ನು ಕಂಡು, ಮುಟ್ಟಿಸಿ, “ಟ್ರಯಲ್ ಮಾಡುವುದಾದರೆ, ಹೇಳಿ ಕಳಿಸಿ. ಬರುತ್ತೇನೆ” ಎಂದೆ.

ಆದರೆ ಅವರು ಅದಾಗಿ ಒಂದೇ ವಾರದಲ್ಲಿ, ”ಬನ್ನಿ ಉಪ್ಪೂರರೇ, ಇವತ್ತು  ಹಾಲಾಡಿ ಮುಂಡುಕೋಡಿನ ಹತ್ರ ನಿಮ್ದೇ ಪ್ರಸಂಗ. ಎಲ್ಲಾ ತಯಾರಿ ಅವರೇ ಮಾಡಿಕೊಂಡಿರಂಬ್ರು. ನೀವು ಬಂದ್ರ್ ಸಾಕು” ಅಂದರು. ನಾನು “ಆಯ್ತು” ಎಂದು ನನ್ನದೇನಾದರೂ ಸಹಾಯ ಬೇಕಾದೀತು ಎಂದು, ಆ ದಿನ ಏಳು ಗಂಟೆಯ ಹೊತ್ತಿಗೇ ಹೋಗಿ ಚೌಕಿಯ ಒಂದು ಬದಿಯಲ್ಲಿ ಕುಳಿತೆ. ನನ್ನನ್ನು ಯಾರೂ ಮಾತಾಡಿಸುವವರಿಲ್ಲ. ಗುರುತಿದ್ದವರೂ “ನಮಸ್ಕಾರ” ಎಂದು ಹೇಳಿ, “ಇವತ್ತು ನಿಮ್ಮ ಪ್ರಸಂಗವಂಬ್ರಲೆ” ಎಂದು ನಕ್ಕು ಮಾತಾಡಿಸಿ ಹೋದರು. ಪ್ರಸಂಗದ ಬಗ್ಗೆ ಚರ್ಚಿಸುವುದಾಗಲೀ, “ಹೇಗೆ? ಏನು?” ಎಂದು ಕೇಳುವುದಾಗಲೀ, ಯಾರೂ ಮಾಡಲಿಲ್ಲ. ನಾನು “ಹೋ, ಅವರೇ ಎಲ್ಲ ಸಿದ್ಧತೆ ಮಾಡಿಕೊಂಡಿರಬಹುದು” ಎಂದು ಸುಮ್ಮನೆ ಕುಳಿತೆ.

ಸುಮಾರು ಹತ್ತು ಗಂಟೆಗೆ ಬಾಲಗೋಪಾಲ. ಪೀಠಿಕೆ ಸ್ತ್ರೀವೇಷ,  ಮುಗಿದು ಒಡ್ಡೋಲಗ ಶುರುವಾಯಿತು. ಸಂಗೀತಗಾರರಾಗಿ ಬಂದ ಮೊದಲ ಭಾಗವತರು ಪ್ರಸಂಗವನ್ನು ಶುರು ಮಾಡಿದರು. ನೋಡಿದರೆ ನಾನು ಬರೆದ ಪದ್ಯವನ್ನು ಬಿಟ್ಟು. ಬೇರೆ ಪದ್ಯ ಹೇಳುತ್ತಿದ್ದಾರೆ. ನನಗೆ ಯೋಚನೆಯಾಯಿತು. ನಿಧಾನವಾಗಿ ಕುಳಿತಲ್ಲಿಂದ ಎದ್ದು, ಭಾಗವತರ ಹಿಂದೆ ಹೋಗಿ ನಿಂತುಕೊಂಡು ನೋಡಿದೆ. ಪ್ರಸಂಗ ಪುಸ್ತಕ ನನ್ನದೆ. ಕೊನೆಗೆ ನನ್ನನ್ನು ನೋಡಿದ ಅವರು “ಮೊದಲ ಒಡ್ಡೋಲಗಕ್ಕೆ ಯಾವ ಪದ್ಯ,ಯಾವ್ದಾದ್ರೂ ಆತ್ತೆ” ಅಂತ ನಗಾಡಿ. “ಮುಂದಿನ ಪದ್ಯ ಇದರದ್ದೇ ಹೇಳೂದ್” ಅಂದರು. ನಾನು ಸುಮ್ಮನಾದೆ. ಮುಂದಿನ ಪದ್ಯ ಅದರದ್ದೇ ಆಯಿತು. ಆದರೆ ಅವರು ಮುಂಚಿತವಾಗಿ ಪ್ರಸಂಗ ಪುಸ್ತಕವನ್ನು ಓದಿಯೇ ಇರಲಿಲ್ಲ. ಪದ್ಯದ ಶಬ್ದಗಳನ್ನು ಹುಡುಕಿ ಹುಡುಕಿ, ತಪ್ಪು ತಪ್ಪಾಗಿ ಹೇಳುತ್ತಿದ್ದರು.

ನನಗೆ ತಡೆಯಲಾಗಲಿಲ್ಲ. “ಒಮ್ಮೆಯೂ ಓದಿಕೊಳ್ಳಲಿಲ್ಲವೇ?” ಎಂದು ಸ್ವಲ್ಪ ಜೋರಾಗಿಯೇ ಕೇಳಿದೆ. ಅವರು ನಕ್ಕು “ಇಲ್ಲ. ಪ್ರಸಂಗ ಪುಸ್ತಕ ಭಾಗವತರ ಹತ್ರವೇ ಇತ್ತು. ಇವತ್ತು ಬೆಳಗಾತ ನಮ್ಮ ಎಲ್ಲರನ್ನು ಕರೆದು, ಕತೆ ಹೀಗೆ ಹೀಗೆ ಎಂದದ್ದೇ ಸೈ” ಎಂದರು. ನಾನು “ಹಾಗಾದರೆ ಭಾಗವತರನ್ನು ಬರಲಿಕ್ಕೆ ಹೇಳಿ” ಅಂದೆ. ಅಷ್ಟರಲ್ಲಿ ಮತ್ತೊಂದು ಪದ್ಯವನ್ನೂ ಅವರು ಹೇಳಿದರು. ಆಗಲೇ ಯಾರೋ ಭಾಗವತರಿಗೆ ನಾನು ಅಲ್ಲಿ ನಿಂತಿದ್ದರ ಬಗ್ಗೆ ಹೇಳಿರಬೇಕು. ಅವರು ಮುಂಡಾಸು ಕಟ್ಟಿಕೊಂಡು ಗಡಿಬಿಡಿಯಲ್ಲಿ ಹಾಜರಾದರು. ಘಟ್ಟದ ಮೇಲಿನವರು. ಗೌಡರು. ಅವರ ಹೆಸರೂ ಮರೆತು ಹೋಗಿದೆ. ಒಳ್ಳೆಯ ಸ್ವರ ಕಂಚಿನ ಕಂಠ. ಯಾವ ಯಾವ ಪದ್ಯವನ್ನು ಹೇಗೆ ಹೇಳುವುದು? ಎಲ್ಲಿ ಯಾವ ರಾಗ ಬಳಸುವುದು ಎಂದು, ಅವರು ಗುರುತನ್ನೂ ಮಾಡಿ ಕೊಂಡಿರಲಿಲ್ಲ. ನನಗೆ ಆಶ್ಚರ್ಯವಾಯಿತು. ಪಾತ್ರಧಾರಿಗಳು ಮಾತಾಡುವಾಗ ಮುಂದಿನ ಪದ್ಯ ಹೇಗೆ ಹೇಳುತ್ತೀರಿ? ಎಂದು ಕೇಳಿದರೆ, ಅವರು ಹೇಗೆ ಹೇಳುವುದು? ಎಂದು ನನ್ನನ್ನೇ ಕೇಳಿದರು. ಅರ್ಥಧಾರಿಗಳಾದರೂ ಒಳ್ಳೊಳ್ಳೆಯವರೇ ಇದ್ದರು. ನರಾಡಿ ಭೋಜ ಶೆಟ್ಟಿ, ಹಳ್ಳಾಡಿ ಕೃಷ್ಣ, ಬೇಳಂಜೆ ಸುಂದರ ಮುಂತಾದ ಕಲಾವಿದರಿದ್ದರೂ ಎಲ್ಲರೂ ಬರೀ ಗಡಿಬಿಡಿ ಮಾಡಿಕೊಂಡು ಆಚೆ ಈಚೆ ತಿರುಗುತ್ತಿದ್ದರು.

 ಪುರಾಣ ಪ್ರಸಂಗವನ್ನು ಆಡುವಾಗಲೂ ಒಮ್ಮೆ ಚೌಕಿಯಲ್ಲಿ ಪರಸ್ಪರ ಮಾತಾಡಿಕೊಂಡು ಆಟ ಮಾಡಬೇಕು ಎನ್ನುವವ ನಾನು. ಹಿಂದೆ ಶಂಭು ಹೆಗಡೆಯವರು, ವಾಸುದೇವ ಸಾಮಗರಂತವರನ್ನು, ಹಾಗೆ ಚೌಕಿಯಲ್ಲಿ  ಪುಸ್ತಕವನ್ನು ತೆರೆದು, ಪದ್ಯವನ್ನು ಮನಸ್ಸಿಗೆ ತಂದುಕೊಂಡು, “ಈ ಪದ್ಯಕ್ಕ್ ನಾನು ಹೀಂಗೆ ಅರ್ಥ ಹೇಳ್ತೆ. ನೀನು ಹೀಂಗೆ ಹೇಳು” ಎಂದು ಚರ್ಚಿಸುತ್ತಿದ್ದುದನ್ನು ಕಂಡು, ಕೇಳಿದವವನು. ಪೂರ್ವ ತಯಾರಿಯಿಲ್ಲದ್ದರಿಂದ ಕೊನೆಗೆ ಎಲ್ಲಿಯವರೆಗೆ ಎಂದರೆ ಪ್ರಸಂಗದಲ್ಲಿರುವ ಕೆಲವು ಪದ್ಯಗಳನ್ನು, ಇದು ಬೇಡ, ಇದು ಹೇಳಿ, ಎಂದು ನಾನೇ ಹೇಳಬೇಕಾಯಿತು. ಅಂತೂ ಬೆಳಗಿನವರೆಗೂ  ನನ್ನ ಒದ್ದಾಟದಲ್ಲಿ “ಆಟ ಆಯಿತು”.

ನನಗೆ ತುಂಬಾ ಬೇಸರವಾಯಿತು. ಒಬ್ಬಿಬ್ಬರು ಕಲಾವಿದರು “ಹೇಗಾಯಿತು?” ಎಂದು ಕೇಳಲು ಬಂದು, ನನ್ನಿಂದ ಬೈಸಿಕೊಂಡರು. ಮತ್ತು ಕೆಲವರು “ಅದು ಮೊದಲ ಪ್ರದರ್ಶನ ಅಲ್ದಾ” ಎರಡು, ಮೂರು ಆಗುತ್ತಿದ್ದ ಹಾಗೆ ಹಿಡಿತಕ್ಕೆ ಬಂದು, ಸಮ ಆಗುತ್ತದೆ” ಎಂದು ನನಗೆ ಸಮಾಧಾನ ಹೇಳಿದರು. ಮುಂದೆ ಒಂದು ಹತ್ತು ಹದಿನೈದು ಪ್ರದರ್ಶನವೂ ಆಯಿತೆಂದು ಕೇಳಿದೆ. ಆದರೆ ನಾನು ನೋಡಲು ಹೋಗಲಿಲ್ಲ. ಮತ್ತೆ ಆ ಪ್ರಸಂಗ ಮೂಲೆಗೆ ಹೋಯಿತು. ಅದರಲ್ಲಿ ಅವರಿಗೆ ಬೇಕಾದ ಹಾಸ್ಯ, ಲಘು ದೃಶ್ಯಗಳು ಇರಲಿಲ್ಲ. ಪದ್ಯಗಳೂ ಉದ್ದುದ್ದ ಇದ್ದು, ಅದರ ಸಾಹಿತ್ಯವೂ ಅವರಿಗೆ ರುಚಿಸಲಿಲ್ಲ ಎಂದು ಕಾಣುತ್ತದೆ. “ಆ ಪ್ರಸಂಗದ ಪದ್ಯ ಸ್ವಲ್ಪ ಜಿಡ್ಕ್ ಮರ್ರೆ,” ಅಂದರಂದೂ ಕೇಳಿದೆ. ಆದರೂ ಒಮ್ಮೆಮ್ಮೆ ಅವರೊಟ್ಟಿಗೆ ಮೇಳಕ್ಕೆ ಹೋಗಿ, ಒಂದು ವೇಷಮಾಡಿ, ಅವರೊಂದಿಗೆ ಸಮಾಲೋಚನೆ ಮಾಡಿ ಅದನ್ನು ಆಡಬೇಕು ಎಂದು  ಅನ್ನಿಸುತ್ತಿತ್ತು. ಬೇರೆ ಉದ್ಯೋಗವಿಲ್ಲದೇ, ಒಮ್ಮೊಮ್ಮೆ ರಾಮಣ್ಣ ಶೆಟ್ರನ್ನು ಕೇಳಿಕೊಂಡು, ಮೇಳಕ್ಕೆ ಸೇರುವ ಅಂತ ಅನ್ನಿಸಿದ್ದೂ ಉಂಟು. ಆಗ ಅಪ್ಪಯ್ಯ ಹೇಳುತ್ತಿದ್ದ ಮಾತು ನೆನಪಾಗುತ್ತಿತ್ತು. ಅವರು, “ಮೇಳಕ್ಕೆ ಸೇರಿದರೆ ಮುಖ್ಯ ಕಲಾವಿದರಾದರೆ ಮಾತ್ರ ಅಡ್ಡಿಲ್ಲ. ಅಲ್ಲದಿದ್ದರೆ ಅವರ ಪಾಡು ಕಷ್ಟ. ದುಡಿಮೆ ಜೀವನಕ್ಕೆ ಸಾಕಾಗುವುದಿಲ್ಲ” ಎಂದಿದ್ದರು. ಹಾಗಾಗಿ ನಮ್ಮನ್ನು ಮೇಳಕ್ಕೆ ಸೇರಿಸಲು ತೀವ್ರವಾಗಿ ಒತ್ತಾಯಿಸಲಿಲ್ಲ. “ಮಕ್ಳೆ ಸಾಧ್ಯವಾದಷ್ಟು ಓದಿ. ಒಳ್ಳೆಯ ಸಂಸ್ಕಾರಯುತರಾಗಿ ಬಾಳಿದರೆ ಸಾಕು” ಎನ್ನುತ್ತಿದ್ದರು. ಹಾಗಾಗಿ ಮೇಳಕ್ಕೆ ಸೇರಿ, ಅದರಲ್ಲಿ ನನ್ನ ಭವಿಷ್ಯವನ್ನು ಕಂಡುಕೊಳ್ಳಲು ಧೈರ್ಯ ಸಾಲದಾಯಿತು. ನನ್ನೆದುರೇ ಇರುವ ಹಲವಾರು ಕಲಾವಿದರ ಪರಿಸ್ಥಿತಿಯನ್ನು ನೋಡಿದ ನನಗೆ, ಒಮ್ಮೆ ಹೋಗಿ ಜಯಿಸಲು ಆಗದಿದ್ದರೆ ನಾನು ಮೂಲೆಗೆ ಬಿದ್ದೇನು ಎಂದು ಭಯವಾಯಿತು. ಆದರೂ ಒಮ್ಮೆ, ಡಾ. ಶಿವರಾಮ ಕಾರಂತರಿಗೆ ಒಂದು ಪತ್ರ ಬರೆದು, “ನಾನು ಉಪ್ಪೂರರ ಮಗ, ನಾನು ಸ್ವಲ್ಪ ಕುಣಿತ ಕಲಿತಿದ್ದೇನೆ. ನನ್ನನ್ನು, ನಿಮ್ಮ ಯಕ್ಷರಂಗದ ಮೇಳಕ್ಕೆ ಸೇರಿಸಿಕೊಳ್ಳಬಹುದೇ” ಎಂದು ಕೇಳಿಕೊಂಡಿದ್ದೆ. ಅವರಿಂದ ಕೂಡಲೇ ಉತ್ತರ ಬಂತು, “ತಾನು ಪಾತ್ರಧಾರಿಗಳ ಆಯ್ಕೆ ಮಾಡುವ ವಿಷಯದಲ್ಲಿ ತಲೆ ಹಾಕುತ್ತಲಿಲ್ಲ. ನೀವು ಕು.ಶಿ. ಹರಿದಾಸ ಭಟ್ಟರನ್ನು ಕೇಳಬಹುದು” ಎಂದು. ಆದರೆ ನಾನು ಅದೇಕೋ ಆ ವಿಷಯವನ್ನು ಅಲ್ಲಿಗೇ ಬಿಟ್ಟುಬಿಟ್ಟೆ.

 ಏನಾದರೂ ಉದ್ಯೋಗಕ್ಕೆ ಪ್ರಯತ್ನಿಸುವುದೇ ನನ್ನ ಗುರಿಯಾಯಿತು. ಆ ಸಮಯದಲ್ಲಿ ನಾನು ಓದುವಕಾಲಕ್ಕೆ ಸರಿಯಾಗಿ ಮನಸ್ಸು  ಕೊಟ್ಟು ಓದಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಅನ್ನಿಸದಿರಲಿಲ್ಲ. ಅದೇ ಸಮಯದಲ್ಲಿ ವರದಾ ಗ್ರಾಮೀಣ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಅಂತ ಕೆಲವು ರಿಟರ್ನ ಟೆಸ್ಟ್ ಗಳಿಗೂ ಹೋಗಿ ಹಾಜರಾಗುತ್ತಿದ್ದೆ. ಕೊನೆಗೆ ಚಿಕ್ಕಮಗಳೂರು, ಕೊಡಗು ಗ್ರಾಮೀಣ ಬ್ಯಾಂಕ್ ಪರೀಕ್ಷೆಯಲ್ಲಿ ಪಾಸಾಗಿ ಖುಷಿಯಾಯಿತು. ವರದಾ ಗ್ರಾಮೀಣ ಬ್ಯಾಂಕ್ ಪರೀಕ್ಷೆ ಯಲ್ಲೂ ಪಾಸು. ಆದರೆ ಇಂಟರ್ ವ್ಯೂ ಎದುರಿಸಿ ಮೇಲೆ ಬೀಳಲು ಪ್ರಭಾವ ಇಲ್ಲದೇ ಆಗುವುದಿಲ್ಲ ಎಂದು ಎಲ್ಲರೂ ಹೇಳುವವರೆ. ಒಮ್ಮೆ ಹಾಲಾಡಿ ಶ್ರೀನಿವಾಸ ಶೆಟ್ರು ಸಿಕ್ಕಿ, ನೀವ್ ಉಪ್ಪೂರ್ರ ಮಗ ಅಲ್ದಾ ಈಗ ಎಲ್ಲಿದ್ರಿ? ಎಂದು ನನ್ನನ್ನು ಕೇಳಿದಾಗ,  ನನ್ನ ಪರಿಸ್ಥಿತಿಯನ್ನು ಅವರಿಗೆ ತಿಳಿಸಿದೆ. ಅವರಿಗೆ ಚಿಕ್ಕಮಗಳೂರು ಕೊಡಗು ಗ್ರಾಮೀಣ ಬ್ಯಾಂಕ್ ನ ಚಯರ್ ಮ್ಯಾನ್ ರ ಸಂಬಂಧಿಕರೊಬ್ಬರ ಪರಿಚಯ ಇದೆಯೆಂದೂ. ತಾನು ಅವರಲ್ಲಿಗೆ ನನ್ನನ್ನು ಕರೆದೊಯ್ದು ಅವರಿಂದ ಪತ್ರ ಕೊಡಿಸುತ್ತೇನೆ ಎಂದೂ ಹೇಳಿದರು. ನನಗೆ ಅಷ್ಟೇ ಭರವಸೆ  ಸಾಕಾಯಿತು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ