ಸೋಮವಾರ, ಅಕ್ಟೋಬರ್ 23, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 36

ಕೊನೆಗೆ ಆದದ್ದಾಗಲಿ ಎಂದು ಒಂದು ಪುಸ್ತಕದ ಅಂಗಡಿಯನ್ನು ಹುಡುಕಿಕೊಂಡು ಹೋಗಿ ಅಂಗವಿಕಲತೆಯ ಬಗ್ಗೆ ಭರ್ತಿ ಮಾಡಬೇಕಾದ ನಿಗದಿತ ನಮೂನೆಯ ಅರ್ಜಿಯನ್ನು ಪಡೆದುಕೊಂಡೆ. ಅದಕ್ಕೆ ಒಂದು ಪೋಟೋ ಬೇಕಾಗಿತ್ತು. ಪೋಟೋ ಸ್ಟುಡಿಯೋವನ್ನು ಎಲ್ಲಿದೆ ಎಂದು ಯಾರನ್ನೋ ವಿಚಾರಿಸಿಕೊಂಡು ಹೋಗಿ ಸ್ಟುಡಿಯೋ ತಲುಪಿದೆ. ನನ್ನ ಪೋಟೋ ತೆಗೆಸಿದ್ದಾಯಿತು. ಎಷ್ಟು ಸಾಧ್ಯವೋ ಅಷ್ಟುಬೇಗ ಪೋಟೋ ಬೇಕಿತ್ತು ಎಂದು ವಿನಂತಿಸಿಕೊಂಡೆ. ಅವರು ಒಂದು ಗಂಟೆ ಬಿಟ್ಟು ಬರಲು ಹೇಳಿದರು. ಆ ಅಪರಿಚಿತ ಊರಿನಲ್ಲಿ ನನಗೆ ಬೇರೆ ಏನೂ ಮಾಡಲಿಕ್ಕಿಲ್ಲದೇ, ಅಲ್ಲಿಯೇ ಹೊರಗೆ ಕಾಯುತ್ತಾ ಚಡಪಡಿಸುತ್ತಾ ಕುಳಿತೆ. ಕೊನೆಗೆ ಅವರಿಂದ ಪೋಟೋ ವನ್ನು ಪಡೆದು ಅರ್ಜಿಯಲ್ಲಿ ಅದನ್ನು ಅಂಟಿಸಿದೆ, ಅರ್ಜಿ ಸಿದ್ಧವಾಯಿತು. ಇನ್ನು ಅದಕ್ಕೆ ಅಧಿಕೃತ ಜಿಲ್ಲಾ ವೈದ್ಯಾಧಿಕಾರಿಗಳಿಂದ ಸಹಿ ಮಾಡಿಸಬೇಕು. ಗುರುತು ಪರಿಚಯವಿಲ್ಲದ ಊರು. ಎದುರಿಗೆ ಬರುವ ಎಲ್ಲರ ಮುಖವೂ ನನಗೆ ಒಂದೇ ತರ ಕಾಣಿಸುತ್ತದೆ. ಆದರೆ ನನಗೆ ಸಹಾಯ ಮಾಡುವವರು ಯಾರು? ಆಸ್ಪತ್ರೆಯಲ್ಲಿ ಎಲ್ಲಿ ಹೋಗಬೇಕು?. ಏನು ಮಾಡಬೇಕು? ಗೊತ್ತಿಲ್ಲ. ಆದರೂ ಬಿಡುವ ಹಾಗಿಲ್ಲ. ಜೀವನದ ಸೋಲು ಗೆಲುವಿನ ಪ್ರಶ್ನೆ. ಅಂತೂ ಸುಮಾರು ಒಂದು ಗಂಟೆಯ ಸುಮಾರಿಗೆ ಶಿವಮೊಗ್ಗ ಜಿಲ್ಲಾ ಆಸ್ಪತ್ರೆಗೆ ನಡೆದುಕೊಂಡು ಹೋಗಿ ತಲುಪಿದೆ.

ಅಲ್ಲಿಯ ಮೂಳೆತಜ್ಞ ವೈದ್ಯರಿಂದ ನನ್ನ ಅರ್ಜಿಗೆ ಸಹಿ ಹಾಕಿಸಬೇಕಿತ್ತು. ಅವರು ಯಾರು? ಎಲ್ಲಿ ಸಿಗುತ್ತಾರೆ? ಎಂಬುದನ್ನು ಕೇಳಿ ತಿಳಿದುಕೊಂಡು ಹೋಗಿ, ಅಲ್ಲಿ ಕಾಯುತ್ತಿದ್ದ ರೋಗಿಗಳ ಸರತಿಯ ಸಾಲಿನಲ್ಲಿ ನಿಂತು ಕಾಯತೊಡಗಿದೆ. ಮನಸ್ಸಿನ ಒಳಗೆಲ್ಲ ದುಗುಡ ತಂಬಿತ್ತು. ಸಾವಿರ ಸಲ ದೇವರನ್ನು, “ಕಾಪಾಡು ನನಗೆ ಈ ಕೆಲಸವನ್ನು ಕೊಡಿಸು ದೇವರೆ” ಎಂದು ಬೇಡಿಕೊಳ್ಳುತ್ತಿದ್ದೆ. ಅಷ್ಟರಲ್ಲಿ ಡಾಕ್ಟರ್ ರೋಗಿಗಳ ಪರಿಶೀಲನೆ ಮಾಡುತ್ತಿದ್ದ ಕೋಣೆಯ ಬಾಗಿಲಿನ ಒಳಗಿನಿಂದ ಹೊರಕ್ಕೆ ಮುಖ ಹಾಕಿ ಎಲ್ಲರನ್ನೂ ಅವಲೋಕಿಸಿದ ಒಬ್ಬರು, ನನ್ನನ್ನು ಕಂಡು ಒಳಗೆ ಬರಬೇಕೆಂದು ಕೈಮಾಡಿ ಕರೆದರು. ಅವರೇ ನನಗೆ ಸಹಿ ಹಾಕಬೇಕಾಗಿದ್ದ ಡಾಕ್ಟರ್ ಆಗಿದ್ದರು. ಅವರ ಹೆಸರು ಡಾಕ್ಟರ್ ಬಿ. ಆರ್. ತಾಹಶೀಲ್ದಾರ್.

ಒಬ್ಬ ಎಕ್ಸಿಡೆಂಟಿನಿಂದ ಗಾಯಗೊಂಡ ರೋಗಿಯ ಕೈಗೆ ಆ ಡಾಕ್ಟರ್ ರವರು ಬ್ಯಾಂಡೇಜ್ ಮಾಡುತ್ತಿದ್ದರು. ಅಲ್ಲಿ ಬೇರೆ ಯಾರೂ ಇರಲಿಲ್ಲ. ನನ್ನನ್ನು ಕರೆದವರು ನಾನು ಒಳಗೆ ಬಂದ ಕೋಡಲೇ, “ಬನ್ನಿ. ಇಲ್ಲಿ ಸ್ವಲ್ಪ ಹಿಡಿದುಕೊಳ್ಳುತ್ತೀರಾ? ಎಂದರು. ಅಲ್ಲಿಯ ನರ್ಸ್ ಎಲ್ಲೋ ಹೊರಗೆ ಹೋಗಿರಬೇಕು. ಆಗಲೆ ಊಟದ ಸಮಯವೂ ಆಗಿದ್ದುದರಿಂದ ಸ್ವಲ್ಪ ಗಡಿಬಿಡಿಯಲ್ಲೂ ಇದ್ದರು. ನಾನು ಆ ರೋಗಿಯ ಕೈಯನ್ನು ಹಿಡಿದುಕೊಂಡು ಅವರಿಗೆ ಸಹಾಯ ಮಾಡಿದೆ. ಬ್ಯಾಂಡೆಜನ್ನು ಕಟ್ಟಿ ಮುಗಿಸಿದ ಮೇಲೆ, ಆ ರೋಗಿಯನ್ನು ಕಳಿಸಿ, ಕೈಯನ್ನು ಸಿಂಕಿನಲ್ಲಿ ತೊಳೆದುಕೊಳ್ಳುತ್ತಾ, ನನ್ನನ್ನು ನೋಡಿ “ನಿಮ್ಮದು, ಏನು ಸಮಸ್ಯೆ?” ಎಂದರು. ನಾನು ಅರ್ಜಿಯನ್ನು ಅವರ ಮುಂದೆ ಹಿಡಿದು, ಅದಕ್ಕೊಂದು ಸಹಿ ಬೇಕಿತ್ತು ಅಂದೆ. ಅವರು “ಓಹೋ, ಸರಕಾರಿ ಕೆಲಸಕ್ಕಾಗಿಯೋ?” ಎಂದು ನನ್ನನ್ನು ಒಮ್ಮೆ ಮೇಲಿನಿಂದ ಕೆಳಗೆ ನೋಡಿ ಪರೀಕ್ಷಿಸಿದರು. ಕಾಲನ್ನೂ ನೋಡಿದರು. “ನೀವು ಸರಿಯಾಗಿಯೇ ನಡೆದಾಡುತ್ತೀರಲ್ಲ. ಡಿಪಿಶಿಯೆನ್ಸಿ ಎಂದು ಹೇಗೆ ಬರೆದು ಕೊಡಲಿ?” ಎಂದು ಅನುಮಾನ ಮಾಡಿದರು. ನನ್ನ ಎಡದ ಕಾಲು ಬಲಗಾಲಿಗಿಂತ ಸ್ವಲ್ಪವೇ ಸಪೂರ ಇದ್ದರೂ, ಊನತೆ ಅಂತ ಇರಲಿಲ್ಲ. ಅವರು ಮತ್ತೆ ಸ್ವಲ್ಪ ಯೋಚನೆ ಮಾಡಿ “ಇರಲಿ, ನಿಮಗೆ ಒಳ್ಳೆಯದಾಗುವುದಾದರೆ ಆಗಲಿ “ ಎಂದು ಅರ್ಜಿಯನ್ನು ಅವರ ಸ್ವಹಸ್ತಾಕ್ಷರದಿಂದ ತುಂಬಿಸಿ, ಸಹಿ ಹಾಕಿ ಕೊಟ್ಟರು.

ನನಗೆ ಹೋದ ಜೀವ ಬಂದ ಹಾಗೆ ಆಯಿತು. ಕಣ್ಣು ತುಂಬಿ ಬಂದಿತು. ಅವರಿಗೆ ಕೃತಜ್ಞತೆ ಹೇಳಿ, ಬೆಳಿಗ್ಗೆಯಿಂದ ಏನೂ ತಿನ್ನದೇ ಇದ್ದುದರಿಂದ ಹಸಿವೆಯಾಗಿ ಸಂಕಟವಾಗುತ್ತಿದ್ದುದರಿಂದ ಹೋಟೇಲಿನಲ್ಲಿ ಏನೋ ಒಂದಷ್ಟು ಗಡಿಬಿಡಿಯಲ್ಲಿ ತಿಂದಹಾಗೆ ಮಾಡಿ ಊಟದ ಶಾಸ್ರ್  ಮುಗಿಸಿ ಸೀದಾ ಕೆಇಬಿ ಆಫೀಸಿಗೆ ಓಡಿದೆ. ಆಗಲೇ ಮೂರು ಗಂಟೆಯ ಹತ್ತಿರ ಹತ್ತಿರ ಆಗಿತ್ತು. “ಹೋ ಬಂದಿರಾ” ನೀವು ಬರುವುದಿಲ್ಲ ಎಂದು ಎಣಿಸಿದ್ದೆವು” ಎಂದ ಅಲ್ಲಿಯ ಗುಮಾಸ್ತರೊಬ್ಬರು ನನ್ನ ಸರ್ಟಿಫಿಕೇಟ್ ಗಳನ್ನು ಪುನಹ ಪರಿಶೀಲಿಸಿದರು. ಮತ್ತು ಆಗಲೇ ಹೊಡೆದು ಹಾಕಿ ಬಿಟ್ಟು ಬಿಟ್ಟಿದ್ದ ನನ್ನ ಹೆಸರನ್ನು ಮತ್ತೆ ಸೇರಿಸಿಕೊಂಡರು. ನನ್ನ ವಿವರದ ಫೈಲನ್ನು ಎಟೇಂಡರ್ ಒಬ್ಬರ ಹತ್ತಿರ ಇಂಟರ್ ವ್ಯೂ ನಡೆಯುವ ಚೇಂಬರಿಗೆ ಕಳುಹಿಸಿಕೊಟ್ಟರು. ಆಗ ರಾಮಭದ್ರಯ್ಯ ಎನ್ನುವ ಅಧೀಕ್ಷಕ ಇಂಜಿನಿಯರ್ ಒಬ್ಬರು ಶಿವಮೊಗ್ಗ ವೃತ್ತದ ಮುಖ್ಯಸ್ಥರಾಗಿದ್ದು  ನಮ್ಮ ನೇಮಕಾತಿಯ ಪ್ರಕ್ರಿಯೆಗಳನ್ನು ನಡೆಸುತ್ತಿದ್ದರು. ಬೆಳಿಗ್ಗೆ ತಡವಾಗಿದ್ದರಿಂದ ಉಳಿದುಕೊಂಡಿದ್ದ ನಾಲ್ಕಾರು ಮಂದಿಯ ಸಂದರ್ಶನವನ್ನು ಊಟ ಮಾಡಿ ಬಂದ ಮೇಲೆ ಮುಗಿಸಿ, ಮಧ್ಯಾಹ್ನ ದ ಇಂಟರ್ ವ್ಯೂ ಶುರುವಾಯಿತು. ಸುಮಾರು ಹದಿನೈದು ಇಪ್ಪತ್ತು ಮಂದಿ ಇದ್ದಿರಬಹುದು. ನನ್ನ ಕೆಟಗರಿಯ ನಾಲ್ಕಾರು ಜನ ಅಂಗವಿಕಲ ಅಭ್ಯರ್ಥಿಗಳು ಇದ್ದರು.  ನನಗೋ ಎದೆ ಬಡಬಡ ಹೊಡೆದುಕೊಳ್ಳುತ್ತಿದೆ. ಆದರೂ ನಾನು ಸುಮ್ಮನೇ ಕುಳಿತುಕೊಳ್ಳಲಿಲ್ಲ. ಸಂದರ್ಶನ ಮುಗಿಸಿ ಹೊರಬಂದ ಅಭ್ಯರ್ಥಿಗಳನ್ನು ಅಡ್ಡ ಹಾಕಿ “ನಿಮಗೆ ಏನೆಲ್ಲ ಪ್ರಶ್ನೆ ಕೇಳಿದರು? ನೀವು ಏನು ಉತ್ತರ ಕೊಟ್ಟಿರಿ? ಎಂದು ಎಲ್ಲರನ್ನೂ ಕೇಳಲು ಶುರುಮಾಡಿದೆ. ನನಗೆ ಅದು ಬಹಳ ಅನುಕೂಲವೂ ಆಯಿತು. ಸುಮಾರು ಆರು ಗಂಟೆಯ ಹೊತ್ತಿಗೆ ನನ್ನ ಸಂದರ್ಶನವು ಆಗಿ ಮುಗಿಯಿತು. ಚೆನ್ನಾಗಿಯೇ ಆಯಿತು. ಹಿಂದಿನ ತಯಾರಿಗಿಂತ ಆ ದಿನದ ಓಡಾಟದಿಂದ ಆದ ತಯಾರಿಯೇ ನನಗೆ ಹೆಚ್ಚು ಸಹಾಯ ಮಾಡಿತು.

ಆ ದಿನ ಶಾರದೆಯವರ ಮನೆಯಲ್ಲಿಯೇ ಇದ್ದು, ಮರುದಿನ ಸೀದಾ ಶಿರೂರಿಗೆ ಹೋದೆ. ರಾಜನಿಗೆ ನಡೆದದ್ದನ್ನು ತಿಳಿಸಿದೆ. ಅವನೂ ಕೇಳಿ “ಒಳ್ಳೆಯದಾಗಲಿ” ಎಂದ. ಮುಂದೆ ಅಲ್ಲಿಯೇ ಸುಮಾರು ಮೂರು ತಿಂಗಳ ಕಾಲ ಕೆಲಸ ಮಾಡಿದೆ. ಅಂತೂ ಅವನು ನನ್ನನ್ನು ತನ್ನ ತಮ್ಮನಂತೆ, ಸ್ನೇಹಿತನಂತೆ ನೋಡಿಕೊಂಡ. ಅಲ್ಲಿಯೇ ನನ್ನ ಉಬ್ಬಸ ಕಾಯಿಲೆಗೆ ಔಷಧಿಯನ್ನು ಕೊಟ್ಟು, ಪ್ರೀತಿಯಿಂದ ಆಧರಿಸಿದ. ಅದಾಗಿ ಸ್ವಲ್ಪ ದಿನದಲ್ಲಿಯೇ ಅಂದರೆ ಮೇ ತಿಂಗಳು 1986 ರಲ್ಲಿ ನನಗೆ ಉಡುಪಿಗೆ  ಕೆಲಸಕ್ಕೆ ಹಾಜರಾಗಲು ಕೆಇಬಿಯಿಂದ ನೇಮಕಾತಿ ಆದೇಶದ ಕರೆ ಬಂದಿತು. ನಾನು ಸಂತೋಷದಿಂದ ಕುಣಿದಾಡಿದೆ. ಇಷ್ಟು ದಿನದ ಕಷ್ಟಗಳೆಲ್ಲ ಪರಿಹಾರವಾಯಿತು ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟೆ. ಬದುಕಿನ ಅತ್ಯಂತ ದುಃಖದ ಕಾಲದಲ್ಲಿ ಕಾರ್ಕೋಟಕ ಸರ್ಪದಿಂದ ಕಚ್ಚಿಸಿಕೊಂಡು, ವಿಕಲಾಂಗನಾದ ನಳನಿಗೆ, ಆ ಊನವೇ ವರವಾಗಿ, ಜೀವನದ ದಾರಿಯಾದಂತೆ, ನನಗೂ ನನ್ನ ಊನತೆಯೇ ನನ್ನ ಅನ್ನಕ್ಕೊಂದು ಮೂಲವಾಗಿ ಹೋಯಿತು. ನಿಗದಿತ ದಿನದಂದು ಶ್ರೀಧರ ಅಣ್ಣನೊಂದಿಗೆ ಉಡುಪಿಯ ಆಫೀಸಿಗೆ ಬಂದು ಕೆಲಸಕ್ಕೆ ಹಾಜರಾದೆ. ಅಲ್ಲಿ ನಾನು ಕುಂದಾಪುರದಲ್ಲಿ ಓದುತ್ತಿದ್ದಾಗ, ಕೊಡ್ಗಿ ಕೌಂಪೌಂಡಿನಲ್ಲಿ ಇದ್ದಾಗ, ಅಲ್ಲಿಯೇ ಕೆಳಗಿನ ಮನೆಯಲ್ಲಿ ಬಾಡಿಗೆ ಬಿಡಾರದಲ್ಲಿ ಇದ್ದ ಕೃಷ್ಣಮೂರ್ತಿ ಹೊಳ್ಳರೂ, ಅವರ ಪತ್ನಿಯೂ ಇದ್ದುದನ್ನು ಕಂಡು ಪರಿಚಯದವರು ಒಬ್ಬರು ಇದ್ದಾರಲ್ಲ ಎಂದು ಖುಷಿಯಾಯಿತು.

ನನ್ನನ್ನು ನೋಡುತ್ತಲೇ ಹೊಳ್ಳರು  “ಹೋ ದಿನೇಶ, ಏನು? ನೀನಿಲ್ಲಿ. ಎಂದರು.  ನಾನು  ಕೆಲಸ ಸಿಕ್ಕಿದ ಬಗ್ಗೆ ಹೇಳಿದೆ. ಅವರು “ಹೋ ಚಾನ್ಸ್ ಹೊಡ್ದ್ಯಲ ಮಾರಾಯ. ಇದು ತುಂಬಾ ಒಳ್ಳೆಯ ಕೆಲಸ. ಎಷ್ಟೋ ಜನ ದುಡ್ಡು ಕೊಟ್ಟು ಬಂದು ಸೇರುತ್ತಾರೆ. ಮುಂದೆ ಇಲಾಖೆಯ ಪರೀಕ್ಷೆಗಳನ್ನು ಕಟ್ಟಿ ಪಾಸ್ ಆದರೆ ದೊಡ್ಡದೊಡ್ಡ ಪ್ರಮೋಶನ್ ಇದೆ. ಫ್ರೀ ಲೈಟಿಂಗ್, ರಜಾ ಸೌಲಭ್ಯ ಮೊದಲಾದ ಎಲ್ಲಾ ಅನುಕೂಲ ಇದೆ ಎಂದರು. ನನಗೆ ಯಾವುದಾದರೂ ಒಂದು ಉದ್ಯೋಗ ಸಿಕ್ಕಿದರೆ ಸಾಕಾಗಿತ್ತು. ಆ ದಿನ ಅವರ ಲೆಕ್ಕದಲ್ಲಿ ನಮಗೆ ಹತ್ತಿರದ ಬೊಬ್ಬರ್ಯ ಹೋಟೇಲಿನಲ್ಲಿ ಕಾಫಿ ತಿಂಡಿಯೂ ಆಯಿತು. ನನಗೆ ಮನೆಯ ಹತ್ತಿರದ ಕುಂದಾಪುರದ ಆಫೀಸಿನಲ್ಲಿ ಕೆಲಸವಾದರೆ, ಪ್ರತೀ ದಿನ ಮನೆಗೆ ಹೋಗಿ ಬರಬಹುದಲ್ಲ ಅಂತ ಆಸೆಯಾಗಿ ಕೆಲಸವನ್ನು ಕುಂದಾಪುರದ ಆಫೀಸಿಗೆ ಬದಲಾಯಿಸಲು ಸಾಧ್ಯವೇ?” ಎಂದು ಕೇಳಿದೆ. ಆಗ ಶ್ರೀಧರಣ್ಣಯ್ಯ “ಉಡುಪಿ ಒಳ್ಳೆಯ ಜಾಗ. ತುಂಬಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. ಬೆಳೆಯಬಹುದು. ಕುಂದಾಪುರ ಸಧ್ಯ ಬೇಡ. ಇಲ್ಲಿ ಆಗದಿದ್ದರೆ ಮತ್ತೆ ನೋಡುವ” ಅಂದ. ನಾನು ಒಪ್ಪಿ ಸುಮ್ಮನಾದೆ. ಉಡುಪಿಯಲ್ಲಿ ಅದೇ ದಿನ ವರದಿ ಮಾಡಿಕೊಂಡಾಯಿತು. ಮುಂದೆ ಎರಡೇ ತಿಂಗಳಲ್ಲಿ ಬಳ್ಳಾರಿಯ ಚಿಕ್ಕಮಗಳೂರು ಕೊಡಗು ಗ್ರಾಮೀಣ ಬ್ಯಾಂಕಿನಿಂದಲೂ ಕೊಪ್ಪಳ ಎಂಬ ಊರಿಗೆ ಗ್ರಾಮೀಣ ಬ್ಯಾಂಕ್ ನಲ್ಲಿ ಆಫೀಸರ್ ಆಗಿ ಆಯ್ಕೆಯಾಗಿ ಕೆಲಸಕ್ಕೆ ಆದೇಶ ಬಂತು. ಕೂಡಲೇ ಆ ಕೆಲಸ ಸಿಗಲು ಕಾರಣರಾದ ಶ್ರೀನಿವಾಸ ಶೆಟ್ಟರನ್ನೂ ಹೋಗಿ ಕಂಡು, ವಿಷಯ ತಿಳಿಸಿ, “ಏನು ಮಾಡುವುದು?” ಎಂದು ಕೇಳಿದೆ. ಅವರು ಸಂತೋಷಪಟ್ಟು “ಹೋ ಇದು ಊರ್ಮನೆಲ್ಲೇ ಆಯ್ತಲ್ಲ. ಗವರ್ನ್ ಮೆಂಟ್ ಕೆಲಸ. ಒಳ್ಳೆದಾಯ್ತು. ಬ್ಯಾಂಕಿನ್ ಕೆಲ್ಸಕ್ ಹೋಗ್ಬೇಕಂತೇನ್ ಇಲ್ಲೆ. ವಿಚಾರ ಮಾಡಿ. ನಿಮಗೆ ಯಾವುದು ಒಳ್ಳೆದೋ, ಹಾಂಗೆ ಮಾಡಿ” ಎಂದರು. ನನ್ನ ಜೊತೆಯ ಸ್ನೇಹಿತರು, ಹಿರಿಯ ಸಹೋದ್ಯೋಗಿಗಳು  “ಇದೇ ಕೆಲಸ ಒಳ್ಳೆಯದು” ಎಂದುದರಿಂದ ,“ನಾನು ಬ್ಯಾಂಕಿನ ಕೆಲಸಕ್ಕೆ ಹಾಜರಾಗುವುದಿಲ್ಲ. ಈಗಾಗಲೇ ಕೆಇಬಿಯಲ್ಲಿ ಕೆಲಸ ಸಿಕ್ಕಿದೆ” ಎಂದು ಚಿಕ್ಕಮಗಳೂರು ಕೊಡಗು ಗ್ರಾಮೀಣ ಬ್ಯಾಂಕಿಗೆ ಪತ್ರ ಬರೆದು ಹಾಕಿದೆ.

ಆದರೂ ನನಗೆ ಕೆಲವೊಮ್ಮೆ ನಾನು ಸರಿ ಇದ್ದೂ, ಬೇರೆ ಯಾವುದೋ ಅಂಗವಿಕಲ ಅಭ್ಯರ್ಥಿಯ ಅನ್ನಕ್ಕೆ ಕಲ್ಲು ಹಾಕಿದೆ ಎಂದು ಅನ್ನಿಸುತ್ತಿದ್ದುದುಂಟು. ಆದರೆ ನನ್ನ ಜೊತೆಯಲ್ಲಿ ಕೆಲಸಕ್ಕೆ ಸೇರಿದ ನನ್ನ ಸಹೋದ್ಯೋಗಿಗಳು ತಾನು ಇಷ್ಟು ದುಡ್ಡು ಕೊಟ್ಟು ಬಂದಿದ್ದೇನೆ, ಇಷ್ಟು ಪ್ರಭಾವ ಇದ್ದು ಅವರ ಮೂಲಕ ಕೆಲಸಕ್ಕೆ ಬಂದಿದ್ದೇನೆ ಎನ್ನುವಾಗ, ಅವರೂ ಬೇರೆ ಪ್ರತಿಭಾವಂತರ ಸ್ಥಾನವನ್ನು ಕಸಿದವರಲ್ಲವೇ? ಅನ್ನಿಸಿ ಸ್ವಲ್ಪ ಸಮಾಧಾನ ಪಟ್ಟುಕೊಂಡೆ. ಇದನ್ನು ಬಿಟ್ಟರೆ ನನ್ನ ಜೀವನ ನಡೆಯಲು ಸಾಧ್ಯವಿಲ್ಲದ್ದರಿಂದ, ನಾನು ಬೇರೆ ಆಯ್ಕೆಯನ್ನು ಮಾಡಿಕೊಳ್ಳುವಂತಿರಲಿಲ್ಲ. ಆದರೆ ಅಂದೇ ನಾನು ಇನ್ನು ಅಂಗವಿಕಲ ಎಂಬ ರಿಯಾಯಿತಿಯಿಂದ ಸರಕಾರದಿಂದ ಸಿಗುವ ಯಾವುದೇ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳುವುದಿಲ್ಲ ಎಂದು ನಿಶ್ಚಯಮಾಡಿದೆ.  ಒಟ್ಟಿನಲ್ಲಿ, ಡಾಕ್ಟರ್ ಇಂಜಿನಿಯರ್ ಕೆಲಸ ಬಿಟ್ಟು, ಬರೀ ಬ್ಯಾಂಕ್ ಕೆಲಸ, ಮಾಸ್ಟರ್ ಕೆಲಸ ಮಾತ್ರ ಗೊತ್ತಿದ್ದ ನನಗೆ, ಕೆಇಬಿಯಂತಹ ಆಫೀಸಿನಲ್ಲಿ ಇಂತಹ ಬರವಣಿಗೆ, ಲೆಕ್ಕಪತ್ರಗಳ ಕೆಲಸ ಇರುತ್ತದೆ ಅಂತ ಗೊತ್ತಾದದ್ದು, ಇಲ್ಲಿ ಕೆಲಸಕ್ಕೆ ಅಂತ ಆಯ್ಕೆಯಾಗಿ ಈ ಕೆಇಬಿಗೆ ಸೇರಿದ ಮೇಲೆಯೆ. ಆಗ ನಮ್ಮ ಹಳ್ಳಿಯ ಮನೆಯಲ್ಲಿಯೂ ಕರೆಂಟ್ ಇಲ್ಲದ ಕಾರಣ, ಚಿಮಣಿಯ ಎಣ್ಣೆಯ ಮಂದಬೆಳಕಿನ ಪ್ರಕಾಶದ ಸುತ್ತ ಇರುವ ಗಾಢವಾದ ಕತ್ತಲೆಯನ್ನೇ ಕಂಡಿದ್ದ ನನಗೆ, ಹೊರಗೆ ಅಲ್ಲಲ್ಲಿ ರಸ್ತೆ ಬದಿಯಲ್ಲಿ ವಿದ್ಯುತ್ ಕಂಬ, ವಯರ್ ಗಳನ್ನು ಮಾತ್ರ ನೋಡಿದ್ದ ನಾನು, ಅಲ್ಲಿ ಎಲೆಕ್ಟ್ರಿಕ್, ವಯರ್ ಮತ್ತು ಕಂಬದ ಕೆಲಸ ಮಾತ್ರ ಇರಬಹುದು ಎಂದು ಎಣಿಸಿದ್ದು, ಒಳಗೆ ಇಷ್ಟೆಲ್ಲ ಇದೆ ಎಂದು ತಿಳಿದಂತಾಯಿತು. ಅಂತೂ ಆ ಕೆಲಸದಿಂದ ನನಗೆ ಒಂದು ನೆಲೆಯಾಯಿತು. ಅಮ್ಮನ ಮನದ ಹಾರೈಕೆ, ದೇವರಲ್ಲಿ ಇಟ್ಟ ಮೊರೆ ಫಲ ನೀಡಿತು. ಒಟ್ಟಾರೆ ನಾನು ಆ ಹುದ್ದೆಗೆ ಸೇರಿ ಡಿಪಾರ್ಮೆಂಿಲಟ್ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿ ಮೂರು ನಾಲ್ಕು ಪದೋನ್ನತಿಯನ್ನು ಪಡೆದು, ಲೆಕ್ಕಾಧಿಕಾರಿಯಾಗಿ ಒಂದು ಕಛೇರಿಯ ಲೆಕ್ಕಪತ್ರ ವಿಭಾಗದ ಮುಖ್ಯಸ್ಥನಾಗಿ ದುಡಿಯುವ ಹಾಗೆ ಆಗಿ, ಇಡೀ ನನ್ನ ಸೇವಾವಧಿಯಲ್ಲಿ ಯಾವುದೇ ಕಪ್ಪುಚುಕ್ಕೆಯಿಲ್ಲದೇ ಪ್ರಾಮಾಣಿಕವಾಗಿ ದುಡಿದು ನೆಮ್ಮದಿಯಿಂದ ಬದುಕು ಸಾಗಿಸುವಂತಾಯಿತು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ