ಭಾನುವಾರ, ಅಕ್ಟೋಬರ್ 8, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 21

ಶಂಕರನಾರಾಯಣದಲ್ಲಿ ಪಿಯುಸಿ ಮುಗಿದು ನಾನು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಿಗ್ರಿಗೆ ಸೇರಿದೆ. ಯಾವ ಗ್ರೂಪ್ ತೆಗೆದುಕೊಳ್ಳಬೇಕು ಎಂಬ ಗೊಂದಲವೇ ನನಗೆ ಇರಲಿಲ್ಲ. ಯಾಕೆಂದರೆ ಯಾವುದಾದರೂ ಆದೀತು, ಓದಿಸುವ ಅಪ್ಪಯ್ಯ ಓದಿಸುತ್ತಾರೆ. ನಾನು ಓದಿದರೆ ಸೈ ಅಂತ. ಕೆಲವರಿಗೆ ಶಾಲೆಗೆ ಸೇರುವ ಮೊದಲೇ ತಾನು ಇಂತದ್ದೇ ಲೈನಲ್ಲಿ ಓದಬೇಕು, ಡಾಕ್ಟರೋ, ಇಂಜಿನಿಯರೋ, ವಕೀಲರೋ, ಲೆಕ್ಚರರೋ ಆಗಬೇಕು ಅಂತ ಇರುತ್ತದಂತೆ. ಈ ವಿಷಯದಲ್ಲಿ ನನಗೆ ಯಾರಾದರೂ ಹಿರಿಯರನ್ನು ಕೇಳಬೇಕು ಅಂತ ಯಾಕೋ ಅನ್ನಿಸಿರಲೇ ಇಲ್ಲ ಅಂತ ಕಾಣುತ್ತದೆ. “ಒಟ್ಟು ಓದಿದರೆ ಸೈ” ನಂತರ ಯಾವುದಾದರೂ ಕೆಲಸಕ್ಕೆ ಸೇರುವುದು. ಆ ಕಾಲದಲ್ಲಿ ನನ್ನಂತೆಯೇ ಹಲವಾರು ಮಂದಿ ಇದ್ದಿರಬಹುದು. ಆದರೆ ಅದರ ನಿಜವಾದ ಗಂಭೀರತೆಯ ಅರಿವಾದದ್ದು ಡಿಗ್ರಿ ಮುಗಿದು ನಾನು ಮನೆಯಲ್ಲಿ ಕೆಲಸವಿಲ್ಲದೇ ಕುಳಿತಾಗ. ನನಗೆ ಒಮ್ಮೊಮ್ಮೆ ಅನ್ನಿಸುವುದು. ಇನ್ನೊಮ್ಮೆ ಶಾಲೆಗೋ, ಕಾಲೇಜಿಗೋ ಸೇರುವ ಚಾನ್ಸ್ ನನಗೆ ಸಿಕ್ಕಬೇಕಿತ್ತು. ಆಗ ಸ್ವಲ್ಪ ಜಾಗ್ರತೆ ಮಾಡಬಹುದಿತ್ತು ಅಂತ. ಎಲ್ಲರಿಗೂ ಹಾಗೆಯೋ? ಏನೋ. ನನ್ನ ಸ್ನೇಹಿತರು, ಓರಗೆಯವರು "ಹ್ವಾ, ನಾನು ಬಿ. ಝಡ್. ಸಿ. ತಗಂಡೆ" ಎಂದರು. ನಾನೂ ಅದಕ್ಕೆ ಸೇರಿದೆ.
ಆಗ ಕುಂದಾಪುರದ ಹಳೆಯ ಬಸ್ ಸ್ಟಾಂಡ್ ಹತ್ತಿರ ಡಾ.ರವೀಂದ್ರ ಕೊಡ್ಗಿಯವರ ಕೊಡ್ಗಿ ಕಂಪೌಂಡ್ ಎಂಬ ಹೆಸರಿನ ಒಂದು ದೊಡ್ಡ ಮನೆಯಿತ್ತು.  ಅದರ ಉಪ್ಪರಿಗೆಯ ಮೇಲೆ, ಕಾರ್ಕಳ ಬೈಲೂರಿನ ಗೋಪಿಕೃಷ್ಣ ರಾವ್ ಮತ್ತು ಒಬ್ಬ ಟೆಲಿಪೋನ್ಸ್ ಡಿಪಾರ್ಟ್ಮೆಂಟ್ ನಲ್ಲಿ ನೌಕರಿಯಲ್ಲಿದ್ದ ಮಲಿಯಾಳಿ ಕಣ್ಣನ್ ಎಂಬವರು ಇದ್ದ ರೂಮಿನಲ್ಲಿ ನನಗೂ ಇರಲು ಅವಕಾಶ ಸಿಕ್ಕಿತು. ನಾವು ಮೂರು ಜನ. ಬೆಳಿಗ್ಗೆ ಬೆಳಗಾಗುವ ಮೊದಲೇ ಎದ್ದು ಕೆಳಗಿನ ಬಾವಿಕಟ್ಟೆಯಲ್ಲಿ ಮುಖ ತೊಳೆಯುತ್ತಲೇ ಆಗಲೇ ಕೊಡಪಾನದಲ್ಲಿ ಸುರಿದುಕೊಂಡು ತಣ್ಣೀರಿನ ಸ್ನಾನ ಮಾಡುವುದು. ನಂತರ ಒಂದು ಕಾಫಿ ಕುಡಿದರೆ, ಮತ್ತೆ ಕಾಲೇಜಿಗೆ ಹೋಗುವಾಗ ಬೆಳಿಗ್ಗಿನ ಕುಚ್ಚಲಕ್ಕಿಯ ಗಂಜಿ ಊಟ, ಉಳಿದರೆ ರಾತ್ರಿಗೂ ಅದೇ, ರಾತ್ರಿ ಒಮ್ಮೊಮ್ಮೆ ಕಣ್ಣನ್, ಸಾಂಬಾರು ಪುಡಿ ಹಾಕಿ, ಟೊಮೇಟೋ ಹಾಕಿ ಸಾಂಬಾರು ಮಾಡುತ್ತಿದ್ದರು. ಇಲ್ಲದಿದ್ದರೆ ಉಪ್ಪಿನಕಾಯಿ. ಇದ್ದರೆ ತುಪ್ಪ. ಮಧ್ಯಾಹ್ನ ಮಾತ್ರಾ ಹೋಟೇಲು ಊಟ. ಸಂಜೆ ಯಾರಾದರೂ ಸಿಕ್ಕಿದರೆ ಕಾಫಿತಿಂಡಿ. ಇಲ್ಲದಿದ್ದರೆ ಇಲ್ಲ.

ನಾನು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿಗೆ ಸೇರಿದಾಗ. ಅಪ್ಪಯ್ಯ ಪ್ರತೀ ತಿಂಗಳು ನಿಯಮಿತವಾಗಿ ಹಣ ಕೊಡುವುದು ಕಷ್ಟವಾಗುತ್ತದೆ, ನನಗೆ ತೊಂದರೆ ಆಗಬಾರದು ಎಂದು ಬಿದ್ಕಲ್ ಕಟ್ಟೆ ಸಿಂಡಿಕೇಟ್ ಬ್ಯಾಂಕಿನಲ್ಲಿ ಎಜುಕೇಶನ್ ಲೋನ್ ತೆಗೆಸಿಕೊಟ್ಟಿದ್ದರು. ಪ್ರತೀ ತಿಂಗಳೂ ಮೊದಲ ದಿನ ವರ್ಷದಲ್ಲಿ ಹತ್ತು ತಿಂಗಳು ಇನ್ನೂರು ರೂಪಾಯಿಯಂತೆ ನನ್ನ ಕುಂದಾಪುರದ ಸಿಂಡಿಕೇಟ್ ಬ್ಯಾಂಕ್ ಖಾತೆಗೆ ಬರುವಂತೆ ಮಾಡಿದ್ದರು. ಮೂರು ವರ್ಷಕ್ಕೆ ಆರುಸಾವಿರ. ನಾನು ಅದರಲ್ಲೇ ರೂಮ್ ಬಾಡಿಗೆ, ಊಟ ತಿಂಡಿ ಪುಸ್ತಕ ಫೀಸುಗಳಿಗೆ ಖರ್ಚು ಮಾಡಬೇಕಾಗಿತ್ತು. ಕೆಲವೊಮ್ಮೆ ಹಣ ಜಾಸ್ತಿ ಖರ್ಚಾಗಿ ತೊಂದರೆಯಾಗುತ್ತಿತ್ತು. ಆಗಾಗ ಸಿನಿಮಾ ನೋಡುವ ಚಟವೂ ಇತ್ತಲ್ಲ. ಆಗ ಬಸ್ರೂರು ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕನಾಗಿದ್ದ ಶ್ರೀಧರ ಅಣ್ಣಯ್ಯನೂ ಕುಂದಾಪುರದಲ್ಲಿಯೇ ತನ್ನ ಸಹ ಪ್ರಾಧ್ಯಾಪಕರೊಂದಿಗೆ ವಿದ್ಯಾರ್ಥಿಭವನದ ಹತ್ತಿರ ಮಾಳಿಗೆಯ ಮೇಲೆ ರೂಮ್ ಮಾಡಿಕೊಂಡಿದ್ದ. ನನಗೆ ಹಣ ಬೇಕಾದಾಗ ನಾನು ಮೆಲ್ಲ ಅವನಲ್ಲಿಗೆ ಹೋಗಿ ತಲೆ ತುರಿಸಿಕೊಳ್ಳುತ್ತಿದ್ದೆ. ಅವನಲ್ಲಿಗೆ ಹೋದರೆ ಅವನು, “ಏನು ದುಡ್ಡುಗಿಡ್ಡು ಬೇಕಿತ್ತಾ?” ಎಂದು ಕಿಸೆಗೆ ಕೈಹಾಕಿ ಕೈಯಲ್ಲಿದ್ದುದನ್ನು ಲೆಕ್ಕ ಮಾಡದೇ ಕೊಡುತ್ತಿದ್ದ. ನಾನು ಬಂದರೆ ಅದಕ್ಕೇ ಅಂತ ಅವನಿಗೆ ಗೊತ್ತಾಗುತ್ತಿತ್ತು.

ನಮ್ಮ ರೂಮ್ ಮೇಟ್ ಗೋಪಿ ಬಿ. ಎ. ಓದುತ್ತಿದ್ದ. ಅವನು ನನ್ನಂತೆ ಯಕ್ಷಗಾನದ ಹುಚ್ಚಿನವನು. ಎಲ್ಲಿಯಾದರೂ ಆಟ ಇತ್ತು ಅಂತ ಗೊತ್ತಾದರೆ ಸಾಕು. ನಾವು ರಾತ್ರಿ ತಪ್ಪದೇ ಅಲ್ಲಿ ಹೋಗಿ ಹಾಜರಿ ಹಾಕುತ್ತಿದ್ದೆವು. ಮರುದಿನ ನಿದ್ದೆ ಬರದಿದ್ದರೆ ಕಾಲೇಜು. ಆಟ ನೋಡುವುದಕ್ಕಿಂತ ಹೆಚ್ಚಾಗಿ ಆಟದ ಚೌಕಿಯಲ್ಲಿ ಕಲಾವಿದರೊಂದಿಗೆ ಅದೂ ಇದೂ ಮಾತಾಡುತ್ತಾ ಕಾಲ ಕಳೆಯುವುದೇ ನಮಗೊಂದು ಖುಷಿಕೊಡುವ ಸಂಗತಿಯಾಗಿತ್ತು. ಅವರು ಚೌಕಿಯಲ್ಲಿ ಕನ್ನಡಿಯ ಮುಂದೆ ಕುಳಿತು ಮುಖಕ್ಕೆ ಬಣ್ಣ ಹಚ್ಚಿಕೊಳ್ಳುವಾಗ, ವೇಷ ಕಟ್ಟಿಕೊಳ್ಳುವಾಗ, ಕೇದಗೆ ಮುಂದಲೆಗೆ ಝರಿ ಸುತ್ತಿಕೊಳ್ಳುವಾಗ ಅವರ ಪಕ್ಕದಲ್ಲಿ ಕುಳಿತು ಅವರನ್ನು ನೋಡುತ್ತಿರುವುದೇ ಒಂದು ಸಂಭ್ರಮ. ಹಳೆಯ ಪ್ರಸಂಗದ ಆಟ ನೋಡಿದ ಹಾಗೆ, ಎಷ್ಟು ಬಾರಿ ನೋಡಿದರೂ “ಸಾಕು” ಎಂದು ಅನ್ನಿಸುತ್ತಿರಲಿಲ್ಲ. ಇರಲಿ.

ಐರೋಡಿ ಸದಾನಂದ ಹೆಬ್ಬಾರರ ಮಗ ರಾಜಶೇಖರನೂ, ಆಗ ಫೈನಲ್ ಡಿಗ್ರಿಗೆ ಕಾಲೇಜಿಗೆ ಹೋಗುತ್ತಾ, ಬಿಡುವು ಇರುವ ಸಮಯದಲ್ಲಿ ಬೆಳಿಗ್ಗೆ ಸಂಜೆ ಅವನ ಚಿಕ್ಕಪ್ಪ ವೈಕುಂಠ ಹೆಬ್ಬಾರರ ’ಅವಿನಾಶ್ ಮೆಡಿಕಲ್ಸ್” ನಲ್ಲಿ ಕೆಲಸ ಮಾಡುತ್ತಿದ್ದ. ನಮಗೂ ಅವನ ಪರಿಚಯವಾಯಿತು. ಸಲಿಗೆ ಬೆಳೆಯಿತು. ಸರಿ. ಪುರಸೊತ್ತು ಇರುವಾಗ ನಮಗೆ ಅವನ ಅವಿನಾಶ ಮೆಡಿಕಲ್ಸ್ ನಲ್ಲೇ ಕ್ಯಾಂಪ್ ಆಗುತ್ತಿತ್ತು. ಅವನೂ ಯಕ್ಷಗಾನದ ಹುಚ್ಚಿನವನು. ಒಮ್ಮೆ ಉಪ್ಪಿನಕುದ್ರು ಎಂಬಲ್ಲಿಗೆ ಪ್ರತೀದಿನ ರಾತ್ರಿ ಸೈಕಲ್ ಲ್ಲಿ ಹೋಗಿ, ಅಲ್ಲಿ ಒಂದು ದೇವಸ್ಥಾನದಲ್ಲಿ ಆ ಊರಿನ ಕೆಲವು ಹುಡುಗರಿಗೆ ಯಕ್ಷಗಾನ ಕುಣಿತವನ್ನೂ ಕಲಿಸಿದ್ದೆವು. ಹಾಗೆ ಕಲಿಯಲು ಬರುತ್ತಿದ್ದವರಲ್ಲಿ ಮಧುಸೂದನ ಐತಾಳ, ರಾಜಶೇಖರ ಹಂದೆ ನೆನಪಿಗೆ ಬರುತ್ತಾರೆ.

ನಮ್ಮದೇ ಒಂದು ಹವ್ಯಾಸಿ ಮೇಳ ಶುರುವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ನಮ್ಮ ಮೇಳಕ್ಕೆ ಚೇತನಾ ಯಕ್ಷರಂಗ ಎಂಬ ಹೆಸರನ್ನೂ ಇಟ್ಟು ತಿರುಗಾಟ ಮಾಡಿದೆವು. ರಾಜ ಹೆಬ್ಬಾರನ ತಂದೆ ಸದಾನಂದ ಹೆಬ್ಬಾರರೆ ನಮ್ಮ ಭಾಗವತರು. ಅವರೇ ನಾವು ಆಡುವ ಪ್ರಸಂಗದ ಪದ್ಯಗಳಿಗೆ ಅರ್ಥ ಸಹ ಬರೆದು ಕೊಡುತ್ತಿದ್ದರು. ರತ್ನಾವತಿ ಕಲ್ಯಾಣವನ್ನು ಒಂದು ಐನೂರು ಪ್ರದರ್ಶನವನ್ನಾದರೂ ಮಾಡಿರಬಹುದು. ರಾಜನದ್ದು ಭದ್ರಸೇನ. ನನ್ನದು ರತ್ನಾವತಿಯಾದರೆ ಗೋಪಿಯದ್ದು ಹಾಸ್ಯ. ಶಿವಸ್ವಾಮಿ ಹೊಳ್ಳರು ಎಂಬವರ ಧೃಡವರ್ಮ. ಅವರು ಕೋಣಿಯ ಒಂದು ಶಾಲೆಯಲ್ಲಿ ಮಾಸ್ಟ್ರು. ಯಾವ ಯಾವ ಊರಿನಲ್ಲಿ ಆಟಮಾಡಿದೆವೋ. ಅಂತೂ ಚೌತಿಯ ಸಂದರ್ಭದಲ್ಲಿ ನಾವು ತುಂಬಾ ಬಿಜಿಯಾಗಿರುತ್ತಿದ್ದ ನೆನಪು. ನಮ್ಮ ಭಂಡಾರ್ಕಾರ್ಸ್ ಕಾಲೇಜಿನ ಬಯಾಲಜಿ ವಿಭಾಗದಲ್ಲಿ ಎಟೆಂಡರ್ ಒಬ್ಬ ಕುಮಾರ್ ಅಂತ ಇದ್ದಿದ್ದ. ಅವನು ವೇಷ ಮಾಡುತ್ತಿದ್ದ. ಒಳ್ಳೆಯ ಹೆಜ್ಜೆ, ಮಿತವಾದ ಗತ್ತಿನ ಮಾತುಗಾರಿಕೆ. ಅವನೂ ನಮ್ಮ ಜೊತೆಗೇ ಬರುತ್ತಿದ್ದ. ಭೀಷ್ಮ ವಿಜಯ ಆದರೆ ನನ್ನದು ಅಂಬೆ, ರಾಜನ ಸಾಲ್ವ, ಶಿವಸ್ವಾಮಿ ಹೊಳ್ಳರ ಭೀಷ್ಮ. ಸಾಹಸ ಭೀಮ ವಿಜಯ ಆದರೆ ನನ್ನದು ದ್ರೌಪದಿ, ರಾಜ ಹೆಬ್ಬಾರನ ಭೀಮ. ಅಂತೂ ನನಗೆ ಬರೀ ಸ್ತ್ರೀ ವೇಷ. ಆಗ ಪ್ರಭಾಕರ ಐತಾಳ, ಪ್ರಕಾಶ ಹಂದೆ, ರಾಜ ಹೆಬ್ಬಾರನ ಸೋದರ ಅತ್ತೆಯ ಮಗ ಅಂಬರೀಶ ಭಟ್ ಮೊದಲಾದವರು ನಮ್ಮ ಜೊತೆ ವೇಷದಾರಿಗಳು.

ನಾವು ಕೊಡ್ಗಿ ಕಂಪೌಂಡ್ ನ ಮನೆಯ ಮೇಲೆ ಉಪ್ಪರಿಗೆಯ ಬಾಡಿಗೆಯ ರೂಮಿನಲ್ಲಿ ಇರುವಾಗ ನಮ್ಮ ಒಳ್ಳೆಯತನವನ್ನು ಕಂಡ ಅಲ್ಲೇ ಕೆಳಗಿನ ಬಾಡಿಗೆ ಮನೆಯವರು ಕೃಷ್ಣಮೂರ್ತಿ ಹೊಳ್ಳರು ಮತ್ತು ಅವರ ಹೆಂಡತಿ ಜಯಲಕ್ಷ್ಮಿಯವರು ಇಬ್ಬರೂ ಆಗ ಕೆಇಬಿಯಲ್ಲಿ ಕೆಲಸದಲ್ಲಿದ್ದವರು, ಅವರು ನಮಗೆ ಕೆಲವೊಮ್ಮೆ ಬೆಳಿಗ್ಗೆ ಕಾಫಿ ತಿಂಡಿಯನ್ನು ಅವರ ಮನೆಯಿಂದ ಕಳಿಸಿಕೊಡುತ್ತಿದ್ದರು. ಕೆಲವೊಮ್ಮೆ ನಮ್ಮ ಓನರ್ ಕೊಡ್ಗಿಯವರ ಮನೆಯಿಂದಲೂ ತಿಂಡಿ ಬರುತ್ತಿತ್ತು.
ಒಮ್ಮೆ ಕುಂದಾಪುರದ ನರಿಬ್ಯಾಣದಲ್ಲಿ ಆಟ. ಸಾಮಾನ್ಯವಾಗಿ ಶನಿವಾರವೇ ಅಲ್ಲಿ ಆಟವಾಗುವುದು. ಆ ದಿನ ನಮಗೆ ರಜೆಯೂ ಇತ್ತು. ಆವತ್ತು ಬೆಳಿಗ್ಗೆ ಅಪ್ಪಯ್ಯ ನಮ್ಮ ರೂಮಿಗೇ ಬಂದು ಬಿಟ್ಟರು. ಅವರು ಬರುತ್ತಾರೆ ಎಂಬ ಕಲ್ಪನೆಯೂ ಇಲ್ಲದ ನನಗೆ ಆಶ್ಚರ್ಯ. ಅವರೇ “ಮಾಣಿ ನಾನು ಇವತ್ ಇಲ್ಲೇ ಆಯ್ಕಂತೆ. ಮಲ್ಕಂಬ್ಕೆ ಜಾಗ ಇತ್ತಲೆ. ಸಾಕು” ಅಂದರು. ನನಗೆ ಏನಾಗಬೇಕು? ಆಯ್ತು ಎಂದು ಒಪ್ಪಿದೆ. ಆಗಲೇ ತಿಂಡಿ ತಿಂದು ಬಂದಿದ್ದರು. ಮಧ್ಯಾಹ್ನ ಊಟಕ್ಕೆ ಏನಾದರೂ ಮಾಡಬೇಕು ಅಷ್ಟೆ. ಅವರಿಗೆ ನಮ್ಮ ಬಾವಿಕಟ್ಟೆಯಲ್ಲಿ ಸ್ನಾನ ಮಾಡುವಂತೆ ಹೇಳಿ, ಸ್ನಾನ ಮಾಡಿ ಬಂದ ಮೇಲೆ ನಾನು ಮಲಗುವ ಚಾಪೆಯನ್ನು ಹಾಸಿಕೊಟ್ಟು ಮಲಗಲು ತಿಳಿಸಿದೆ. ಅವರು ಮಲಗಿದರು. ಮಧ್ಯಾಹ್ನ ಅವರಿಗೆ ನಾವು ಮಾಡಿದ ಅನ್ನ ಮತ್ತು ಪುಡಿ ಹಾಕಿ ಮಾಡಿದ ಸಾಂಬಾರು, ಮತ್ತೆ ನೀರು ಮಜ್ಜಿಗೆ ಉಪ್ಪಿನ ಕಾಯಿಯನ್ನೇ ಬಡಿಸಿದ್ದಾಯಿತು. ಊಟದ ನಂತರ ಮತ್ತೆ ಮಲಗಲು ವ್ಯವಸ್ಥೆ ಮಾಡಿಕೊಟ್ಟೆ.

ಅಷ್ಟರಲ್ಲಿ ಎಲ್ಲಿಗೋ ಹೋಗಿದ ನಮ್ಮ ಗೋಪಿ, ಬಂದವನೇ “ದಿನೇಶ, ಗೀತಾಂಜಲಿ ಟಾಕೀಸಲ್ಲಿ ಒಂದು ಒಳ್ಳೆಯ ಸಿನಿಮಾ ಬಂದಿತ್ತಂಬ್ರ, ಇವತ್ತೇ ಲಾಸ್ಟ್ ಮಾರಾಯಾ. ಅಪ್ಪಯ್ಯ ಹ್ಯಾಂಗೂ ಮಲ್ಕಂಡಿರಲೆ. ಹೋಪನಾ?” ಎಂದ. ನನಗೂ ಆಸೆಯಾಯಿತು. ಆಗ ಮಧ್ಯಾಹ್ನ ಎರಡುವರೆಯಿಂದ ಮ್ಯಾಟನೀ ಶೋ ಶುರುವಾಗುತ್ತಿತ್ತು. ನಾವು ಅಪ್ಪಯ್ಯ ಮಲಗುವುದನ್ನೇ ಕಾದು, ಅವರಿಗೆ ನಿದ್ರೆ ಬಂದದ್ದು ಖಾತ್ರಿಯಾದ ಮೇಲೆ, ಅವರು ಏಳುವುದರ ಒಳಗೇ ವಾಪಾಸು ಬರಬಹುದು ಅಂತ ಎಣಿಸಿ ಸಿನಿಮಾಕ್ಕೆ ಹೋದೆವು. ಅವರು ಏಳುವುದರ ಒಳಗೆ ವಾಪಾಸು ಬಂದೂ ಆಯಿತು. ಅಪ್ಪಯ್ಯನಿಗೆ ಗೊತ್ತಾಗಲಿಲ್ಲವೋ ಅಥವ ನಮಗೆ ಬೇಸರವಾಗದಿರಲಿ ಅಂತ ಗೊತ್ತಾಗದೇ ಇದ್ದವರಂತೆ ನಟಿಸಿದರೋ ತಿಳಿಯಲಿಲ್ಲ. ರಾತ್ರಿ ಕುಂದೇಶ್ವರ ದೇವಸ್ಥಾನದ ಹತ್ತಿರ ಇದ್ದ ಮೇಳದ ಬಿಡಾರಕ್ಕೆ ನಾವು ಅವರೊಂದಿಗೆ ಹೋಗಿ, ಅಲ್ಲಿಯೇ ಮೇಳದ ರಾತ್ರಿಯ ಊಟ ಮಾಡಿದೆವು. ಆ ಕುಚ್ಚಲಕ್ಕಿ ಅನ್ನ, ನೀರುಳ್ಳಿ ಹಾಕಿ ಮಾಡಿದ ತೊಗರಿಬೇಳೆ ಗೊಜ್ಜು ನಮಗೆ ಮೇಳದ ಊಟದ ಪ್ರಮುಖ ಆಕರ್ಷಣೆ. ಬಾಳೆ ಎಲೆಯ ಮೇಲೆ ಬಡಿಸಿದ ಬಿಸಿಬಿಸಿ ಅನ್ನಕ್ಕೆ ಆ ಖಾರ ಖಾರ ಗೊಜ್ಜನ್ನು ಸ್ವಲ್ಪ ತೆಂಗಿನ ಎಣ್ಣೆಯೊಂದಿಗೆ ಕಲಸಿಕೊಂಡು ಊಟ ಮಾಡುವುದನ್ನು ನೆನಪಿಸಿಕೊಂಡರೆ ಈಗಲೂ ಬಾಯಿಯಲ್ಲಿ ನೀರು ಬರುತ್ತದೆ. ಅದರ ರುಚಿಯೇ ರುಚಿ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ