ಸೋಮವಾರ, ಅಕ್ಟೋಬರ್ 2, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 20


   ಆಗ ಅಮೃತೇಶ್ವರಿ ಮೇಳದಲ್ಲಿದ್ದ ಅಪ್ಪಯ್ಯ, ಕೋಟದಲ್ಲಿ ಅದೇ ಮೇಳದ ಒಂದು ಆಟ ವಹಿಸಿಕೊಂಡು ಅಭಿಮಾನಿಗಳಿಂದ ಟಿಕೇಟು ಮಾರಿ ಸ್ವಲ್ಪ ಹಣ ಸಂಗ್ರಹಿಸುವ ಆಲೋಚನೆ ಮಾಡಿದರು.

ಕೋಟದ ಗಿಳಿಯಾರು ಶಾಲೆಯ ಆಟದ ಮೈದಾನದಲ್ಲಿ ಆಟ. ಕೃಷ್ಣ ವಿವಾಹ ಪ್ರಹ್ಲಾದ ಚರಿತ್ರೆ. ಚಿಟ್ಟಾಣಿಯವರ ಹಿರಣ್ಯಕಶಿಪು, ಕೋಟ ವೈಕುಂಠನ ಕಯಾದು. ವಿಶೇಷ ಆಕರ್ಷಣೆಯಾಗಿ ಕೋಟ ವೈಕುಂಠ ಮತ್ತು ಎಂ.ಎ ನಾಯ್ಕರ ಪೀಠಿಕೆ ಸ್ರೀ್ರ ವೇಷ. ನಾನೂ ಅದರಲ್ಲಿ ವಿಷ್ಣುವಿನ ಪಾತ್ರ ಮಾಡಿದ್ದೆ. ನನ್ನ ಅಕ್ಕನ ಮಗ ವೆಂಕಟೇಶನ ಪ್ರಹ್ಲಾದ.  ಆ ಆಟದಲ್ಲಿ ಸಂಗ್ರಹವಾದ ಹಣವು ಸಾಕಾಗದೇ, ಮಣಿಪಾಲದಲ್ಲಿ ಪರಿಚಿತ ಡಾಕ್ಟರರ ಸಹಾಯದಿಂದ ತಿಂಗಳು ತಿಂಗಳು ಸ್ವಲ್ಪ ಸ್ವಲ್ಪ ಹಣ ಪಾವತಿಸಿ ತೀರಿಸಿದೆ ಎಂದು ಅಪ್ಪಯ್ಯ ಅವರ ಡೈರಿಯಲ್ಲಿ ಬರೆದುಕೊಂಡಿದ್ದರು.


ಹೀಗೆ ಮೂರು ವರ್ಷ ಮನೆಯಿಂದ ಸೈಕಲ್ಲಿನಲ್ಲಿ ಹೋಗಿ ಹೈಸ್ಕೂಲ್ ಮುಗಿಸಿದ ನಾನು, ಮುಂದೆ ಅದೂ ಕಷ್ಟವೆನಿಸಿತು. ಕಾಲೇಜಿಗೆ ಹೋಗುವುದು ಬರುವುದರಲ್ಲೇ ನನ್ನ ದಿನವೆಲ್ಲ ಮುಗಿಯುತ್ತಿತ್ತು. ಮನೆಗೆ ಬಂದರೆ ಸುಸ್ತು. ಓದುವುದಕ್ಕೆ, ಅಭ್ಯಾಸಕ್ಕೆ ಸಮಯ ಸಾಕಾಗುವುದಿಲ್ಲ ಎನಿಸಿತು. ಆಗ ಅಪ್ಪಯ್ಯ ಶಂಕರನಾರಾಯಣದಲ್ಲಿ ಜವುಳಿ ವ್ಯಾಪಾರಿಗಳಾದ ಹಾಗೂ ಅಪ್ಪಯ್ಯನ ಯಕ್ಷಗಾನ ಮಿತ್ರರಾದ ಸರ್ವೋತ್ತಮ ಶೇಟ್ ರವರ ಅಂಗಡಿಯ ಉಪ್ಪರಿಗೆಯಲ್ಲಿ ಎರಡು ವರ್ಷ ಮಟ್ಟಿಗೆ ಒಂದು ಬಿಡಾರವನ್ನು ಗೊತ್ತುಮಾಡಿದರು. ಸರ್ವೋತ್ತಮ ಶೇಟ್ ರವರು ತಾಳಮದ್ದಲೆಯ ಅರ್ಥದಾರಿಗಳು. ಹತ್ತಿರದಲ್ಲಿ ಎಲ್ಲೇ ತಾಳಮದ್ದಲೆಯಾದರೂ ಅವರದು ಸ್ತ್ರೀ ಪಾತ್ರ. ಶಂಕರನಾರಾಯಣದಲ್ಲಿ ಆಟವಾದರೆ ಸಂಜೆ  ಹೆಚ್ಚಿನ ಕಲಾವಿದರೂ ಅವರ ಅಂಗಡಿಗೆ ಹೊಕ್ಕು ಅಂಗಡಿಯ ಒಳಗೆ ಹಾಸಿದ ಹಾಸಿಗೆಯ ಮೇಲೆ ದಿಂಬಿಗೆ ಒರಗಿ ಕುಳಿತು ನಾಲ್ಕು ಮಾತಾಡಿ ಒಂದು ವೀಳ್ಯ ಹಾಕಿ ಹೋಗುತ್ತಿದ್ದರು. ಮತ್ತು ಆಟದ ಮಾರನೇ ದಿನ ಬೆಳಿಗ್ಗೆ ಎಲ್ಲ ಕಲಾವಿದರಿಗೂ ಅವರ ಮನೆಯಲ್ಲಿ ಕಾಫಿತಿಂಡಿ ಆಗುತ್ತಿತ್ತು.

ನನ್ನ ರೂಮಿನ ಬಾಡಿಗೆ ತಿಂಗಳಿಗೆ ನಲವತ್ತು ರೂಪಾಯಿ ಕೊಡಬೇಕಿತ್ತು. ಬೆಳಿಗ್ಗೆ ಗಂಜಿ ಬೇಯಿಸಿಕೊಳ್ಳುತ್ತಿದ್ದೆ. ಮಧ್ಯಾಹ್ನ ಮತ್ತು ರಾತ್ರಿಗೂ ಗಂಜಿಯೇ. ಉಪ್ಪಿನಕಾಯಿಯ ಊಟ. ಒಮ್ಮೊಮ್ಮೆ ಬೆಳಿಗ್ಗೆ ಕಾಫಿ ಕುಡಿಯಲು ಹೋಟೇಲಿಗೂ ಹೋಗುವುದಿತ್ತು. ಬೆಳಿಗ್ಗೆ ಅಲ್ಲಿಯೇ ಹತ್ತಿರ ಇರುವ ಬಾಲಕೃಷ್ಣಭಟ್ ಎನ್ನುವವರ ಮನೆಯಲ್ಲಿ ಸ್ನಾನ, ಮೊದಮೊದಲು ಬಾವಿಕಟ್ಟೆಯಲ್ಲಿ ಸ್ನಾನ ಮಾಡುತ್ತಿದ್ದ ನನ್ನನ್ನು ಕಂಡು ಮಾತಾಡಿಸುತ್ತಿದ್ದ ಅವರು ನನ್ನ ಗುಣವನ್ನು ನೋಡಿ ಬಚ್ಚಲಲ್ಲಿ ಬಿಸಿನೀರು ಸ್ನಾನ ಮಾಡಲು ತಿಳಿಸಿದರು. ನಂತರ ಸ್ವಲ್ಪ ಸಲುಗೆ ಬೆಳೆದು ಬೆಳಿಗ್ಗೆ ಅವರಲ್ಲಿಯೇ ತಿಂಡಿಯೂ ಆಗುತ್ತಿತ್ತು. ಸೈಕಲ್ಲನ್ನು ಅವರ ಮನೆಯಲ್ಲಿಯೇ ಇಡುತ್ತಿದ್ದೆ. ಸಂಜೆ ಬರುವಾಗ, ಅವರ ಮನೆಯಲ್ಲಿ ತರಿಸುತ್ತಿದ್ದ ಸುಧಾ, ಮಯೂರ, ಪ್ರಜಾಮತ ಮುಂತಾದ ಮ್ಯಾಗಸಿನ್ ಗಳನ್ನು ಹಾಗೂ ಪೇಪರ್ ಗಳನ್ನೂ ರೂಮಿಗೆ ತಂದು ಓದುವ ಪರಿಪಾಠವಾಯಿತು. ಕೆಲವು ದಿನ ಊಟವೂ ಅಲ್ಲಿಯೇ ಆಗುತ್ತಿತ್ತು. ಬಾಲಕೃಷ್ಣ ಭಟ್ಡರೂ ಯಕ್ಷಗಾನ ಪ್ರಿಯರೆ. ಅವರಿಗೆ ಮೂರು ಮಂದಿ ಹೆಣ್ಣುಮಕ್ಕಳು. ಅವರೂ ಅಣ್ಣ ಅಣ್ಣ ಎಂದು ನನ್ನನ್ನು ಆದರಿಸುತ್ತಿದ್ದರು.

ಅಲ್ಲಿಯೇ ಉತ್ತರ ದಿಕ್ಕಿನಲ್ಲಿ ನಾಲ್ಕು ಮನೆಯ ಆಚೆ ದೇವಾಡಿಗರ ನಾಲ್ಕಾರು ಮನೆ ಇದ್ದಿತ್ತು. ಅವರ ಮನೆಯಿಂದ ಯಾವಾಗಲೂ ವಾದ್ಯ ಬಾರಿಸಿಕೊಂಡು ಸಂಗೀತ ಅಭ್ಯಾಸ ಮಾಡುವ ಸ್ವರ ಕೇಳುತ್ತಿತ್ತು. ಒಮ್ಮೊಮ್ಮೆ ಹೊರಗೆಲ್ಲಾ ಕತ್ತಲೆ ಇರುವಾಗ, ಎಲ್ಲೆಲ್ಲೂ ಮೌನ ಆವರಿಸಿರುವಾಗ ಆ ವಾದ್ಯದ ನಾದದ ಅಭ್ಯಾಸದ ಒಂದೊಂದೇ ಸ್ವರಗಳು ಬಿಟ್ಟು ಬಿಟ್ಟು ಕೇಳುವಾಗ ಬೇರೆ ಯಾವುದೋ ಲೋಕದ ಸಂಗೀತವನ್ನು ಕೇಳುವಂತೆ ಮೈ ಮರೆಸುತ್ತಿತ್ತು. ಒಮ್ಮೆ ಅಲ್ಲಿಗೆ ನಾನು ರಾತ್ರಿ ಏನೋ ಗಲಾಟೆಯಾಗುತ್ತಿದೆ ಎಂದು ತಿಳಿದು, ಏನು ಎಂದು ತಿಳಿಯಲು ಹೋದಾಗ, ಒಂದು ಮನೆಯಲ್ಲಿ ಒಬ್ಬ ಹೆಂಗಸಿನ ಮೈಮೇಲೆ ಭೂತವೋ ದೆವ್ವವೋ ಬಂದು “ ನೀವೆಲ್ಲ ನನಗೆ ಮೋಸ ಮಾಡಿದಿರಿ. ಅದನ್ನು ನಾನು ಮರೆತಿಲ್ಲಾ? ನಿಮ್ಮನ್ನು ಹೀಗೆ ಬಿಡುವುದಿಲ್ಲ” ಎಂದು ಎದ್ದು ಬಿದ್ದು ಗಲಾಟೆ ಮಾಡುವ ದೃಶ್ಯ ಕಂಡು ಅಲ್ಲಿಯೇ ಸ್ವಲ್ಪ ಹೊತ್ತು ನೋಡುತ್ತಾ ನಿಂತೆ. ಉಟ್ಟ ಬಟ್ಟೆಯ ಪರಿವೆ ಇಲ್ಲದೇ, ತಲೆಕೆದರಿಕೊಂಡು ಕಣ್ಣನ್ನು ವಿಕಾರ ಮಾಡಿ. ತಲೆ ಅಲ್ಲಾಡಿಸುತ್ತಾ ಆಕೆ ಕೂಗುತ್ತಿದ್ದುದನ್ನು ನೋಡಿ ಜನ ಸುತ್ತಲೂ ನೆರೆದು “ಹಾಗಲ್ಲ. ಹೀಗೆ” ಎಂದು ಸಮಜಾಯಿಸಿ ಹೇಳಿ ಕೈಕಟ್ಟಿ ನಿಂತು ಬಿನ್ನವಿಸಿಕೊಳ್ಳುತ್ತಿದ್ದರು. ಮೈಮೇಲೆ ಬಂದದ್ದು ಎರಡು ಮೂರು ತಲೆಮಾರಿನ ಹಿಂದಿನವರ ಆತ್ಮವಂತೆ(ಜಕಣಿ). ಅಂತೂ ಕೊನೆಗೆ “ಧರ್ಮಸ್ಥಳಕ್ಕೆ ಹೋಗುತ್ತೇವೆ ತಪ್ಪು ಕಾಣಿಕೆ ಸಲ್ಲಿಸುತ್ತೇವೆ” ಎಂದೇನೋ ಹೇಳಿದ ಮೇಲೆ ಆ ಹೆಂಗಸು ದೊಪ್ಪೆಂದು ಮುಖ ಅಡಿಮಾಡಿ ಬಿದ್ದು ಬಿಟ್ಟಳು. ನನ್ನ ಮನಸ್ಸಿನಲ್ಲಿ ಆ ಹೆಂಗಸಿನ ಆಕಾರ ಆ ಭೀಕರತೆಯ ನೆನಪು ಇನ್ನೂ ಉಳಿದುಕೊಂಡಿದೆ.

ನನ್ನ ರೂಮಿನ ಹತ್ತಿರವೇ ಜನಾರ್ಧನ ಶೇಟ್ ಎನ್ನುವವರೊಬ್ಬರಿದ್ದರು ಅವರು ಆಗಾಗ ನನ್ನ ರೂಮಿಗೂ ಬಂದು ಅದು ಇದು ಮಾತಾಡುತ್ತಿದ್ದರು. ಅವರ ಪ್ರತಿಭೆ ಎಂತಾದ್ದು ಅಂದರೆ, ಅವರು ಮಾತಾಡುವಾಗಲೇ ಅವರ ಮಾತನ್ನೆ ಸುಂದರ ಛಂದೋಬದ್ದ ಪದ್ಯವನ್ನಾಗಿ ರಚಿಸಿ ಅದನ್ನು ಚಂದವಾಗಿ ಹೇಳುತ್ತಿದ್ದರು. ರಾಜಕೀಯ ವಿಷಯಗಳ ಬಗ್ಗೆಯೂ ಅವರು ಆಶು ಪದ್ಯಗಳನ್ನು ಬರೆದಿದ್ದರು. ಅದನ್ನೆಲ್ಲಾ ಒಂದು ಪುಸ್ತಕ ಮಾಡುವ ಆಶೆ ಹೊಂದಿದ್ದರು. ಆದರೆ ಕೆಲವರು ಅವರು ಪಟಪಟನೆ ಮಾತಾಡಿ ಬೋರು ಹೊಡೆಸುತ್ತಾರೆ ಎಂದು ಅವರನ್ನು ವಿಚಿತ್ರವಾಗಿ ನೋಡಿ ದೂರ ಹೋಗುತ್ತಿದ್ದರು. ಅವರೂ ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿದ ಒಬ್ಬ ವ್ಯಕ್ತಿಯಾಗಿದ್ದಾರೆ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ