ಭಾನುವಾರ, ಅಕ್ಟೋಬರ್ 22, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 35

ನಾನು ರಾಜ ಹೆಬ್ಬಾರನ ಔಷಧಿ ಅಂಗಡಿಯಲ್ಲಿದ್ದುದರಿಂದ ಅವನ ತಂದೆ ಐರೋಡಿ ಸದಾನಂದ ಹೆಬ್ಬಾರರ ಸಂಪರ್ಕಕ್ಕೆ ಪುನಹ ಬಂದು, ಅವರ ನಿರ್ದೇಶನದಲ್ಲಿ ಆದ ಕೆಲವು ರೇಡಿಯೋ ಪ್ರೋಗ್ರಾಮ್ ಗಳಲ್ಲಿ, ರಾಜ ಹೆಬ್ಬಾರನ ಜೊತೆಗೂಡಿ ಭಾಗವಹಿಸಲು ಅವಕಾಶವಾಯಿತು. ಆಗ ಬುಧವಾರ ರಾತ್ರಿ ಒಂಬತ್ತುವರೆಗೆ ಯಕ್ಷಗಾನ ಕಾರ್ಯಕ್ರಮ ಮಂಗಳೂರು ಆಕಾಶವಾಣಿಯಲ್ಲಿ ಬಿತ್ತರವಾಗುತ್ತಿತ್ತು. ಲಂಕಾದಹನದಲ್ಲಿ ಸೀತೆ, ಬಬ್ರುವಾಹನ ಕಾಳಗದಲ್ಲಿ ಚಿತ್ರಾಂಗದೆ, ಜಾಂಬವತಿ ಕಲ್ಯಾಣದಲ್ಲಿ ನಾರದ, ರುಕ್ಮಿಣಿಸ್ವಯಂವರದಲ್ಲಿ ರುಕ್ಮಿಣಿ, ಚಿತ್ರಸೇನ ಕಾಳಗದಲ್ಲಿ ಕರ್ಣ ಇತ್ಯಾದಿ ಪಾತ್ರಗಳನ್ನು ಮಾಡಿ ರೇಡಿಯೋ ಕಾರ್ಯಕ್ರಮದಲ್ಲಿ ಹೆಬ್ಬಾರರ ಭಾಗವತಿಕೆಯಲ್ಲಿ ಅರ್ಥ ಹೇಳಿದೆ. ಸುರೇಶಣ್ಣಯ್ಯನದ್ದು ಮದ್ದಲೆವಾದನ. ರಾಮಚಂದ್ರ ಐತಾಳರು, ಮಣೂರು ರವಿರಾಜ ಹೊಳ್ಳ, ಕಾಶಿ ಮಯ್ಯ, ಶಿವಾನಂದ ಮಯ್ಯ ಗೋಪಾಲ ಶೆಟ್ಟಿಗಾರ್ ಮೊದಲಾದವರು ನಮ್ಮಸಹ ಕಲಾವಿದರಾಗಿದ್ದರು. ಸದಾನಂದ ಹೆಬ್ಬಾರರೇ ಪ್ರಸಂಗದ ಪದ್ಯಗಳನ್ನು ಆಯ್ಕೆ ಮಾಡಿ, ಅದಕ್ಕೆ ಅರ್ಥವನ್ನೂ ಬರೆದು, ಒಂದು ಪ್ಲಾಟ್ ಆಗಿ ಸಿದ್ಧಮಾಡಿ ನಮಗೆ ಕೊಡುತ್ತಿದ್ದರು. ಕಾರ್ಯಕ್ರಮ ಕೊಡುವ ಹಿಂದಿನ ದಿನ ಕೋಟ ಮಣೂರು ಶಾಲೆಯಲ್ಲಿ ಒಂದು ಟ್ರಯಲ್ ಮಾಡಿಕೊಂಡು ಮಂಗಳೂರು ಆಕಾಶವಾಣಿ ಗೆ ಹೋಗಿ ಪ್ರೊಗ್ರಾಮ್ ಕೊಟ್ಟು ಬರುತ್ತಿದ್ದೆವು.

ಬಹುಷ್ಯ ನಾನು ಶಿರೂರಿಗೆ ಹೋಗುವ ಹಿಂದಿನ ವರ್ಷ ಇರಬೇಕು. ಕವಲಾಳಿ ಸದಾನಂದ ವೈದ್ಯರು, ಅವರು ಶಂಕರನಾರಾಯಣ ಜ್ಯೂನಿಯರ್ ಕಾಲೇಜಿನಲ್ಲಿ ಓದುವಾಗ ಪರಿಚಯವಾಗಿದ್ದವರು, ಮತ್ತೆ ಒಮ್ಮೆ ನಮ್ಮನ್ನೆಲ್ಲಾ ಒಟ್ಟು ಮಾಡಿ, ಒಂದು ಹವ್ಯಾಸಿ ಯಕ್ಷಗಾನ ತಂಡವನ್ನು ಕಟ್ಟಿ, ಒಂದು ವ್ಯಾನಿನಲ್ಲಿ ನಮ್ಮನ್ನೆಲ್ಲ ಕರೆದುಕೊಂಡು ಶಿವಮೊಗ್ಗ, ದಾವಣಗೆರೆ ಅಂತ ಹತ್ತಾರು ಕಡೆ ಹೋಗಿ, ಅವರ ಮುಂದಾಳು ತನದಲ್ಲಿ ಕಾರ್ಯಕ್ರಮ ಕೊಟ್ಟು ಬಂದಿದ್ದೆವು. ಆಗ ಆದ ಪ್ರಸಂಗ “ವಿದ್ಯುನ್ಮತಿ ಕಲ್ಯಾಣ”. ನಾನು ಮೊದಲು ಸುಲೋಚನ ಎಂಬ ಕೆಂಪು ಮುಂಡಾಸಿನ ವೇಷ ಮಾಡಿ, ಕೊನೆಗೆ ವೃತ್ತಜ್ವಾಲೆ ಎಂಬ ಹೆಣ್ಣು ಬಣ್ಣದ ವೇಷ ಮಾಡುತ್ತಿದ್ದೆ. ನಮ್ಮ ಶ್ರೀಧರ ಅಣ್ಣಯ್ಯನದ್ದು ಭಾಗವತಿಕೆ. ಹಳ್ಳಾಡಿ ಸುಬ್ರಾಯ ಮಲ್ಯರದ್ದು ಚಂಡೆವಾದನ. ಮದ್ದಲೆಗೆ ಸುರೇಶ ಎನ್ನುವ ನನ್ನ  ಮತ್ತೊಬ್ಬ ಅಣ್ಣ. ಆಗ ನಮ್ಮೊಡನೆ ಇದ್ದವರಲ್ಲಿ ನೆನಪಿಗೆ ಬರುವವರು, ರಾಘವ ಶೆಟ್ಟಿ, ಕಮಲಶಿಲೆ ರಾಮಚಂದ್ರ ಭಟ್, ಕುಪ್ಪಾರು ರವೀಂದ್ರ ಶೆಟ್ಟಿ ಮೊದಲಾದವರು.

ಏತನ್ಮಧ್ಯೆ “ಶಂಕರನಾರಾಯಣದ ಜ್ಯೂನಿಯರ್ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳು ಸೇರಿ ಒಂದು ಯಕ್ಷಗಾನ ಕಾರ್ಯಕ್ರಮ ನಡೆಸುವುದು ಅಂತ ತೀರ್ಮಾನಿಸಿದ್ದೇವೆ ಬನ್ನಿ” ಎಂದು ಕವ್ಲಾಳಿ ಸದಾನಂದ ವೈದ್ಯರು ನನಗೆ ಪತ್ರ ಬರೆದಿದ್ದರು. ಮೊದಲೊಂದು ನಾಟಕ ನಂತರ ಯಕ್ಷಗಾನ ಮಾಡುವುದು ಅಂತ ಮೀಟಿಂಗ್ ಮಾಡಿ ಹಲವಾರು ಸ್ನೇಹಿತರು ಒಟ್ಟಿಗೇ ಸೇರಿ ನಿರ್ಣಯಿಸಿದೆವು. ಭೀಷ್ಮ ವಿಜಯದಲ್ಲಿ ನನ್ನದು ಅಂಬೆ, ಸದಾನಂದ ವೈದ್ಯರ ಭೀಷ್ಮ, ನನ್ನ ಹಳೆಯ ಸ್ನೇಹಿತರಾದ ಶ್ರೀಕಾಂತ ಸಿದ್ದಾಪುರ ಇವರ ಪರಶುರಾಮ, ಕುಪ್ಪಾರು ರವೀಂದ್ರ ಶೆಟ್ಟರ ಸಾಲ್ವ, ಹೆಚ್ಚಿಗೆ ಉಮೇದುವಾರರಿದ್ದುದರಿಂದ ರಾಘವ ಶೆಟ್ಟಿಯವರ ಎರಡನೆಯ ಭೀಷ್ಮ, ಗಣೇಶ ಭಟ್ ರ ಕೊನೆಯ ಅಂಬೆ ಅಂತ ಆಗಿತ್ತು. ಶ್ರೀಧರ ಅಣ್ಣಯ್ಯ, ಬಿದ್ಕಲ್ ಕಟ್ಟೆ ಕೃಷ್ಣಯ್ಯ ಆಚಾರ್ರ ಭಾಗವತಿಕೆ. ಹಳ್ಳಾಡಿ ಸುಬ್ರಾಯ ಮಲ್ಯರ ಚಂಡೆ. ಸುರೇಶಣ್ಣನ ಮದ್ದಲೆವಾದನ. ನಾಲ್ಕಾರು ಟ್ರಯಲ್ ಆಯಿತು.

ಆಟಕ್ಕೆ ಮೂರು ದಿನ ಇದೆ ಎನ್ನುವಾಗ, ನನಗೆ ಶಿವಮೊಗ್ಗದ ಕೆಇಬಿ ಯಿಂದ ಇಂಟರ್ ವ್ಯೂಗೆ ಕರೆ ಬಂತು.. ನನ್ನ ಜೀವನಕ್ಕೊಂದು ದಾರಿಯಾಯಿತು ಎಂದು ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ನಾನು ಅದಕ್ಕೆ ಹಾಜರಾಗಬೇಕು. ಬದುಕಿನ ಪ್ರಶ್ನೆಯಲ್ಲವೇ? ಹಾಗಾಗಿ ಅಂಬೆಯನ್ನು ಗಣೇಶ ಭಟ್ ಎನ್ನುವವರಿಗೆ ಮಾಡಲು ಹೇಳಿ, ಅಂದೇ ನಾನು ಹೊರಡುವುದು ಎಂದು ತೀರ್ಮಾನಿಸಿದೆ. ಆದರೆ ನನಗೆ ಶಿವಮೊಗ್ಗದಲ್ಲಿ ಯಾರೂ ಪರಿಚಯದವರು ಇರಲಿಲ್ಲ. ಹಾಗಾಗಿ ಸಾಗರದಲ್ಲಿ  ವೆಂಕಟಾಚಲ ಹೊಳ್ಳರು ಎಂಬವರಲ್ಲಿಗೆ ಹೋದೆ. ಅವರು ನಮ್ಮ ಸಂಬಂಧಿಕರು. ಶ್ರೀಧರಣ್ಣಯ್ಯನ ಮಾವನೂ ಹೌದು. ಅವರು ಮೊದಲು ವಕೀಲಿ ವೃತ್ತಿಯನ್ನು ಮಾಡುತ್ತಿದ್ದು ವಯಸ್ಸಾದ ನಂತರ ಸಾಗರದ ರಾಘವೇಂದ್ರ ಮಠದಲ್ಲಿ ಮಠದ ಉಸ್ತುವಾರಿಯನ್ನು ನೋಡಿಕೊಂಡು ಇದ್ದರು. ಬಹಳ ನಿಷ್ಠುರವಾದಿಗಳು. ಆಗಿನ ಕಾಲದಲ್ಲೂ ಕಚ್ಚೆಪಂಚೆಯನ್ನು ಉಟ್ಟು ಬಿಳಿ ಜುಬ್ಬವನ್ನು ಹಾಕಿ, ಅದರ ಮೇಲೆ ಕರಿಕೋಟು, ತಲೆಗೆ ಕರೀ ಟೊಪ್ಪಿಯನ್ನು ಧರಿಸುತ್ತಿದ್ದರು. ಅವರು ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರು. ಅವರಿಗೆ ಶಿವಮೊಗ್ಗದಲ್ಲಿ ಯಾರಾದರೂ ಪರಿಚಿತರಿರಬಹುದು ಎಂಬ ಆಸೆ. ಅವರಲ್ಲಿ ನನಗೆ ಇಂಟರ್ ವ್ಯೂ ಬಂದ ವಿಷಯ ಹೇಳಿದೆ. ಅವರು ನನ್ನನ್ನು ರಾಘವೇಂದ್ರ ಮಠಕ್ಕೆ ಕರೆದು ಕೊಂಡು ಹೋಗಿ ಪ್ರಾರ್ಥನೆ ಮಾಡಿಕೊಳ್ಳಲು ಹೇಳಿದರು. ಕೊನೆಗೆ “ಸ್ವಾಮಿಯವರ ಪ್ರಸಾದ ಮತ್ತು ಒಂದು ಪೋಟೋ ಕೊಟ್ಟು, ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಇದೆ. ನಿನ್ನ ಕೆಲಸವಾಗುತ್ತದೆ ಹೋಗು” ಎಂದು ಹರಸಿದರು. ಮತ್ತು “ಕೆಲಸ ಆದರೆ ನನಗೊಂದು ಎಲ್ ಐ ಸಿ. ಯ ಪಾಲಿಸಿ ಕೊಡಬೇಕು” ಎಂದು ಹೇಳಿದರು. “ಕೆಲಸ ಆದರೆ ಖಂಡಿತಾ ಕೊಡುತ್ತೇನೆ” ಎಂದು ಭರವಸೆಯನ್ನು ಕೊಟ್ಟದ್ದಾಯಿತು. ಅವರೇ ಶಿವಮೊಗ್ಗದಲ್ಲಿದ್ದ ಅವರ ಮಗಳು ಶಾರದೆಯ ಮನೆಯ ವಿಳಾಸ ಕೊಟ್ಟು ಅಲ್ಲಿ ಉಳಿದುಕೊಳ್ಳಲು ಹೇಳಿದರು. ಆ ರಾತ್ರಿ ಅಲ್ಲಿಯೇ ಉಳಿದು ಮರುದಿನ ನಾನು ಸೀದಾ ಶಿವಮೊಗ್ಗಕ್ಕೆ ಹೋಗಿ ಅವರ ಮಗಳ ಮನೆಗೆ ಹೋದೆ. ಮರುದಿನ ಮಧ್ಯಾಹ್ನ ಎರಡು ಗಂಟೆಗೆ ನನ್ನ ಇಂಟರ್ ವ್ಯೂ.

ಬೆಳಿಗ್ಗೆ ಹತ್ತು ಗಂಟೆಗೆ ಕೆಇಬಿ ಆಫೀಸನ್ನು ಹುಡುಕಿಕೊಂಡು ಹೋದೆ. ನನ್ನ ಮಾರ್ಕ್ಸ್ ಕಾರ್ಡ್ ಮತ್ತು ಇತರ ದಾಖಲೆಗಳ ಮೂಲಪ್ರತಿಯನ್ನು ಹಾಜರು ಪಡಿಸಿ ಪರಿಶೀಲನೆಗೆ ಒಳಪಡಿಸಬೇಕಿತ್ತು.  ನನ್ನ ಇಂಟರ್ ವ್ಯೂ ಕಾರ್ಡಿನಲ್ಲಿ ಜಿಲ್ಲಾ ವೈದ್ಯರಿಂದ ಅಂಗವಿಕಲತೆಯ ಬಗ್ಗೆ ಪ್ರಮಾಣ ಪತ್ರ ಬೇಕು ಎಂದು ತಿಳಿಸಿದ್ದು, ನಾನು ಅದು ಇಲ್ಲದಿದ್ದುದರಿಂದ ಏನು ಮಾಡುವುದು ಎಂದು ಗೊತ್ತಾಗದೇ ನೋಡುವ ಎಂದು ಹಾಗೇ ಸುಮ್ಮನೇ ಹೋಗಿದ್ದೆ.  ಮೂಲ ಸರ್ಟಿಫಿಕೇಟ್ ಗಳನ್ನು ಪರಿಶೀಲಿಸಿದ ಅಲ್ಲಿನ ಸಿಬ್ಬಂದಿಗಳು ನನಗೆ ಡಾ. ಭಾಸ್ಕರಾನಂದರು ಕೊಟ್ಟ ನನ್ನ ಅಂಗವಿಕಲತೆಯ ಪತ್ರ ನೋಡಿ “ಇದು ಆಗುವುದಿಲ್ಲ. ಜಿಲ್ಲಾ ವೈದ್ಯರಿಂದಲೇ ದೃಢಪತ್ರಿಕೆ ಬೇಕು. ಅದು ಇಲ್ಲದಿದ್ದರೆ ಇಂಟರ್ ವ್ಯೂ ಗೆ ಹಾಜರಾಗಲು ಆಗುವುದಿಲ್ಲ ಎಂದರು. ನನಗೆ ದಿಕ್ಕೇ ತೋರದ ಹಾಗಾಯಿತು. ಏನು ಮಾಡುವುದು ಗೊತ್ತಾಗಲಿಲ್ಲ. ಬೇರೆ ಅರ್ಜಿದಾರರ ದೃಢಪತ್ರಿಕೆಯನ್ನು ತೋರಿಸಿ “ಅಂತದ್ದೇ ಪೋಟೋ ಸಹಿತ ಇರುವ ನಿಗದಿತ ನಮೂನೆಯ ದೃಡಪತ್ರಿಕೆ ಆಗಬೇಕು” ಅಂದರು. ನನಗೆ ಭ್ರಮನಿರಸನವಾಯಿತು. ಅಲ್ಲಿಂದ ಸೀದಾ ಶಾರದೆಯವರ ಮನೆಗೆ ಬಂದು, ಅವರ ಗಂಡನವರಲ್ಲಿ “ ಹೀಗೆ ಹೀಗೆ ಆಯಿತು. ಬಂದದ್ದು ದಂಡ ಆಯಿತು. ನಿಮಗೆ ಯಾರದ್ದಾದರೂ ಪ್ರಭಾವ ಇದ್ದವರ ಪರಿಚಯವಿದೆಯೇ?” ಎಂದು ಕೇಳಿದೆ. ಅವರು “ಇಲ್ಲ” ಅಂದರು. ನನಗೆ ಅತೀವ ನಿರಾಶೆಯಾಯಿತು. ಮುಂದೇನು ಮಾಡಬೇಕು ತಿಳಿಯಲಿಲ್ಲ. ಮನಸ್ಸಿನ ಒಳಗೆ ಎಲ್ಲ ಖಾಲಿಯಾದಂತೆ ಅನ್ನಿಸಿತು. ಆಗಲೇ ಹನ್ನೊಂದು ಗಂಟೆಯಾಗಿತ್ತು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ