ಬುಧವಾರ, ಸೆಪ್ಟೆಂಬರ್ 20, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ  8

ಮನೆಯ ಆಸುಪಾಸು ಎಲ್ಲಿ ಆಟವಾದರೂ ಅಪ್ಪಯ್ಯನ ಜೊತೆ ನಾನು ಹೋಗುವುದಿತ್ತು. ಸ್ವಲ್ಪ ಹೊತ್ತು ಆಟ ನೋಡಿ ಅಪ್ಪಯ್ಯ ಕೊಡಿಸಿದ ಮುಂಡಕ್ಕಿ ಉಪ್ಕರಿ, ನೆಲಗಡಲೆ ತಿಂದು ಮಲಗುವುದು. ಚೌಕಿಯಲ್ಲಿ ಮಲಗುವುದಾದರೆ ಶಾಲನ್ನೂ ಕೊಡುತ್ತಿದ್ದರು. ಕಲಾವಿದರೂ, ನಾನು “ಭಾಗವತರ ಮಗ” ಎಂಬುದರಿಂದ ನನ್ನನ್ನು ಒಲಿಸಿಕೊಳ್ಳಲು ತಿಂಡಿ, ಮಿಠಾಯಿ ಕೊಡಿಸುತ್ತಿದ್ದರು. ಅಪ್ಪಯ್ಯ, ರಂಗಸ್ಥಳಕ್ಕೆ ಬಂದಾಗ ನಾನೂ ಅವರ ಹಿಂದೆ ಸ್ವಲ್ಪ ಜಾಗ ಮಾಡಿ, ಅಲ್ಲಿಯೇ ಕುಳಿತು, ಹಿಂದಿನಿಂದ ಆಟ ನೋಡುತ್ತಿದ್ದುದೂ ನೆನಪಿದೆ. ಬೆಳಿಗ್ಗೆ ಅವರೊಂದಿಗೇ ಮನೆಗೆ ಬರುವುದು. ಡೇರೆ ಮೇಳ ಆದ ಮೇಲೆ ನಾವು ಆಟಕ್ಕೆ ಹೋದರೆ ಮುಂದಿನ ಸಾಲಿನ ಕುರ್ಚಿಯಲ್ಲಿ ಕುಳಿತು ಆಟ ನೋಡುವವರು. ನಿದ್ದೆ ಬಂದರೆ ಅಲ್ಲಿಯೇ ನಿದ್ದೆ.
ಒಮ್ಮೆ ಹಾಲಾಡಿಯಲ್ಲಿ ಆಟ. ಸಾಲಿಗ್ರಾಮ ಮೇಳದಲ್ಲಿ ಅಪ್ಪಯ್ಯ ಇದ್ದ ಸಮಯ. ಆ ವರ್ಷ ಮೇಳದಲ್ಲಿ ಕೆರೆಮನೆ ಮಹಾಬಲ ಹೆಗಡೆ, ಶಂಭುಹೆಗಡೆ, ಗಜಾನನ ಹೆಗಡೆಯವರೂ ಇದ್ದಿದ್ದರು. ಬೆಳಿಗ್ಗೆ ನಾವು ಆಟ ನೋಡಿ ಮುಗಿಸಿ ಅಪ್ಪಯ್ಯನಿಗಿಂತ ಬೇಗ ಮನೆ ಸೇರಿದೆವು. ನನ್ನ ಅಕ್ಕನ ಮಗ ವೆಂಕಟೇಶನೂ ಆಗ ನಮ್ಮ ಮನೆಯಲ್ಲಿ ಇದ್ದ. ಬೆಳಿಗ್ಗೆಯೇ ನಮ್ಮ ಆಟ ಶುರುವಾಯಿತು, ನಮ್ಮ ಮನೆಯ ಅಂಗಳದಲ್ಲಿ. “ಎಲವೊ ಪಾರ್ಥ ಕೇಳು” ಅಂತ ನಾನು ಕುಣಿದರೆ. “ಕಳವಿನಲ್ಲಿ ಬೆಂಗಡೆಯೊಳ್” ಅಂತ ಅವನ ಕುಣಿತ. ಕೈಯಲ್ಲಿ ತೆಂಗಿನ ಹೆಡೆಮಂಡೆಯ ಆಯುಧ. ಅದನ್ನು ಅಂಗಳದ ಕಂಬಕ್ಕೆ ಹೊಡೆದು ನಮ್ಮ ಯುದ್ಧ ಸಾಗಿತ್ತು. ಅಷ್ಟರಲ್ಲಿ ಮಹಾಬಲ ಹೆಗಡೆ, ಶಂಭುಹೆಗಡೆ, ಗಜಾನನ ಹೆಗಡೆಯವರನ್ನು ಅಪ್ಪಯ್ಯ, ನಮ್ಮ ಮನೆಗೆ ಕರೆದುಕೊಂಡು ಬಂದರು. ಅವರು ನಮ್ಮ ಅವತಾರ ನೋಡಿ ನಕ್ಕಿದ್ದೇ ನಕ್ಕಿದ್ದು. ಮುಂದೆ ಬಹುಕಾಲ ನನ್ನನ್ನು ಕಂಡಾಗಲೆಲ್ಲಾ ಮಹಾಬಲ ಹೆಗಡೆಯವರು “ಎಲವೋ ಪಾರ್ಥ ಕೇಳು” ಎಂದು ತಮಾಷೆ ಮಾಡುತ್ತಿದ್ದರು.
ಎಪ್ರಿಲ್ ನಲ್ಲಿ ಪರೀಕ್ಷೆ ಮುಗಿದು ಪಾಸು ಪೈಲು ಹೇಳಿ, ರಜೆ ಸಿಕ್ಕಿದ ಮರುದಿನವೇ ಅಪ್ಪಯ್ಯ ಮನೆಗೆ ಯಾವಾಗ ಬರುತ್ತಾರೆ ಎಂದು ಅಮ್ಮನನ್ನು ಕಾಡುವುದೇ ಕೆಲಸ. ಹತ್ತಿರ ಎಲ್ಲಾದರೂ ಆಟ ಇದ್ದರೆ, ಅಪ್ಪಯ್ಯ ಮನೆಗೆ ಬರುತ್ತಲೇ ನಾನೂ ಅವರ ಜೊತೆಗೆ ಮೇಳಕ್ಕೆ ಹೊರಟೆ. ವೇಷ ಮಾಡುವುದಕ್ಕಲ್ಲ, ಆಟ ನೋಡಿ ಊರು ತಿರುಗಿ ಗಮ್ಮತ್ತು ಮಾಡುವುದಕ್ಕೆ. ಅಪ್ಪಯ್ಯ ಮೇಳದಲ್ಲಿ ಇರುವುದರಿಂದ ನಮಗೆ ಪ್ರವೇಶ ಉಚಿತ, ಅರ್ಧ ರಾತ್ರಿಯ ಮೇಲೆ ಆರಾಮ ಕುರ್ಚಿಯಲ್ಲೇ ನಿದ್ದೆ ಖಚಿತ. ಆಗಲೇ ದಾಮೋದರಣ್ಣಯ್ಯನಿಂದ ತಾಳ ಕಲಿತು ಮಳೆಗಾಲದಲ್ಲಿ ಮನೆಯಲ್ಲಿರುವ ಚಂದ್ರಶೇಖರ ಭಟ್ಟರಿಂದ ಕುಣಿತವನ್ನೂ ಕಲಿತಿದ್ದರೂ, ಆಟದಲ್ಲಿ ವೇಷಮಾಡುವ ಧೈರ್ಯ ಇರಲಿಲ್ಲ. ಆದರೂ ಬಾಲ ಚಂದ್ರಹಾಸ, ವಿಷ್ಣು, ಸಹದೇವ ಅಂತ ಒಂದೆರಡು  ಸಣ್ಣ ವೇಷ ಮಾಡಿದ್ದೆ. ಅಪ್ಪಯ್ಯನೂ ವೇಷ ಮಾಡಲು ಅಂತಹ ಒತ್ತಾಯ ಮಾಡಿದವರಲ್ಲ. ಆಟ ನೋಡುವುದು. ನಿದ್ದೆ ಬಂದರೆ ಅಲ್ಲೇ ನಿದ್ದೆ ಮಾಡುವುದು. ಮರುದಿನ ವ್ಯಾನಿನಲ್ಲಿ ಆ ಊರಿಂದ ಮತ್ತೊಂದೂರಿಗೆ ಪ್ರಯಾಣ ಮಾಡುವುದು. ಅಲ್ಲಿ ಬಿಡಾರದಲ್ಲಿ ನಿದ್ದೆ ಅಥವ ಅಪ್ಪಯ್ಯ ಯಾರಾದರೂ ಅಭಿಮಾನಿಗಳ ಮನೆಗೆ ಹೋದರೆ ಅವರೊಂದಿಗೆ ಹೋಗುವುದು. ಕೆಲವು ಕಡೆಯಲ್ಲಂತೂ ಅಪ್ಪಯ್ಯ, ಅವರ ಕೋರಿಕೆಯ ಮೇರೆಗೆ ಮನೆಯಲ್ಲಿ ಪದ್ಯವನ್ನೂ ಹಾಡುವುದಿತ್ತು. ಆಗ ಮದ್ದಲೆಗಾರರನ್ನೂ ಕರೆಸುತ್ತಿದ್ದರು, ಅಂತೂ ಆಗ ನೋಡಿದ ಆಟಕ್ಕೆ ಲೆಕ್ಕವಿಲ್ಲ.
ಆಟ ನೋಡುವುದಕ್ಕಿಂತ ಮರುದಿನ, ಆ ಊರಿನಿಂದ ಮತ್ತೊಂದೂರಿಗೆ ಹೋಗುವಾಗ ದಾರಿಯಲ್ಲಿ ಅಪ್ಪಯ್ಯ ಮತ್ತು ಕಲಾವಿದರು ಹಿಂದಿನ ದಿನ ಆಟದ ವಿಮರ್ಶೆ ಚರ್ಚೆ ಮಾಡುತ್ತಿದ್ದುದನ್ನು ಕೇಳುವುದೇ ನನಗೆ ಹೆಚ್ಚಿನ ಆಸಕ್ತಿಯ ವಿಷಯ. ಅದರಲ್ಲೂ ದೊಡ್ಡ ಸಾಮಗರು, ಕೆರೆಮನೆ ಸಹೋದರರೂ, ಶಿರಿಯಾರ ಮಂಜು, ವೀರಭದ್ರ ನಾಯ್ಕರಂತ ಅನುಭವಿ ಕಲಾವಿದರು ಎಲ್ಲರೂ ಒಟ್ಟಿಗೇ ಇದ್ದ ತಿರುಗಾಟದ ವರ್ಷ ಅದು. ಪಾತ್ರದ ಬಗ್ಗೆ ಅವರವರೊಳಗೆ ವಿಮರ್ಶೆ ವಾದಗಳೂ ನಡೆಯುತ್ತಿದ್ದವು. ಕೆಲವೊಮ್ಮೆ ಜಗಳವೂ ಆಗುತ್ತಿತ್ತು.
ಒಮ್ಮೆ ಏನಾಯಿತು ಎಂದರೆ,  ಶಿರಿಯಾರ ಮಂಜು ರಂಗಸ್ಥಳಕ್ಕೆ ಪ್ರವೇಶ ಮಾಡುವಾಗ ಯಾವುದೋ ಒಂದು ಪ್ರಸಂಗದಲ್ಲಿ ತೆರೆ ಒಡ್ಡೋಲಗವಾಗಿ ಅರ್ಧ ಚಂದ್ರಾಕೃತಿಯ ಕುಣಿತವಾದ ಮೇಲೆ ನೇರ ಪದ್ಯ ಎತ್ತುಗಡೆ ಮಾಡಿ ಕುಣಿದರು. ಅದು  ಭೀಷ್ಮ ಭೀಷ್ಮ ಭೀಷ್ಮದಲ್ಲಿ ದೇವವೃತನೋ. ಅಥವ ರತ್ನಾವತಿಕಲ್ಯಾಣದ ವತ್ಸಾಖ್ಯನೋ, ಮತ್ತೊಂದೊ ಸರಿಯಾಗಿ ನೆನಪಿಲ್ಲ. ಸಾಮಾನ್ಯವಾಗಿ ಎಲ್ಲರೂ ತೆರೆ ಒಡ್ಡೋಲಗದ ಪ್ರವೇಶದ ನಂತರ ಅರ್ಧ ಚಂದ್ರಾಕೃತಿಯ ಕುಣಿತವಾದ  ಮೇಲೆ ಕುಣಿಯುವ ದಿಗಣ ಕುಣಿಯಲಿಲ್ಲ. ನಾನೂ ಕುಣಿತವನ್ನು ಆಗಷ್ಟೇ ಕಲಿತದ್ದು. ತಪ್ಪು ಗೊತ್ತಾಯಿತು. ನಾನು ರಾತ್ರಿ ಚೌಕಿಯಲ್ಲಿ ಎಲ್ಲ ವೇಷಧಾರಿಗಳು ಮುಖಕ್ಕೆ ಬಣ್ಣ ಹಾಕಿಕೊಳ್ಳುವುದನ್ನು ನೋಡುತ್ತಾ, ಅವರ ಪಕ್ಕದಲ್ಲೇ ಮಂಡಿಯೂರಿ ಕುಳಿತು, ಅದೂ ಇದೂ ಮಾತಾಡುವುದಿತ್ತು. ಆವತ್ತು ದೊಡ್ಡ ಸಾಮಗರ ಪಕ್ಕದಲ್ಲಿ, ಅವರು ಬಣ್ಣ ಹಚ್ಚಿಕೊಳ್ಳುವಾಗ, ಅದೂ ಇದೂ ಮಾತಾಡುತ್ತಾ, ಮಧ್ಯದಲ್ಲಿ “ಅಲ್ಲ ಮರ್ರೆ, ನಿನ್ನೆ ಮಂಜು ನಾಯ್ಕರು ದಿಗಣ ಕುಣಿಯಲೇ ಇಲ್ಲ” ಎಂದೆ. ಅವರು ಬಣ್ಣ ಹಚ್ಚುವುದನ್ನು ನಿಲ್ಲಿಸಿ, ನನ್ನ ಕಡೆ ತಿರುಗಿ ಅಶ್ಚರ್ಯದಿಂದ ನನ್ನನ್ನು ನೋಡುತ್ತಾ “ಹೋ ಮಾಣಿ, ನಿನಗೆ ಗೊತ್ತಿಲ್ಯಾ? ಅದೊಂದು ಗುಟ್ಟಿನ ಸಂಗತಿ. ಅವರಿಗೆ ದಿಗಣ ಕುಣಿಯಲು ಬರುವುದಿಲ್ಲ. ಆದರೆ ಇದನ್ನು ಯಾರಿಗೂ ಹೇಳುದ್ ಬೇಡ, ನಿನ್ನಲ್ಲಿಯೇ ಇರಲಿ”. ಎಂದು ಮೆಲ್ಲನೇ ಕಿವಿಯಲ್ಲಿ ಹೇಳಿದರು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ