ಗುರುವಾರ, ಸೆಪ್ಟೆಂಬರ್ 14, 2017

ನನ್ನೊಳಗೆ
ಭಾಗ 3
ಹಿಂದೆ ನಮ್ಮ ಮನೆ ತಟ್ಟುವಟ್ಟುವಿನ ಹತ್ತಿರದ ಕುದ್ರುಮನೆ ಎಂಬಲ್ಲಿ ಇತ್ತು ಎಂದೆನಲ್ಲ. ಆಲ್ಲಿಯ ಒಂದು ಕತೆ ಹೇಳುತ್ತೇನೆ. ಅಜ್ಜಯ್ಯ ಬೇಸಿಗೆಯಲ್ಲಿ ಮೇಳಕ್ಕೆ ಹೋಗುತ್ತಿದ್ದು, ಮೇಳ ಮುಗಿದು, ದೇವರ ಸೇವೆಯಾಗಿ ಮನೆಗೆ ಬಂದರೆ ಅವರಿಗೆ ಮಳೆಗಾಲದಲ್ಲಿ ಪುರಸೊತ್ತು. ಆಗ ಆಸುಪಾಸು ಊರಿನ ಕೆಲವು ಮಕ್ಕಳಿಗೆ ಪ್ರತೀದಿನ ಸಾಯಂಕಾಲ ಯಕ್ಷಗಾನ ತಾಳವನ್ನು,  ಭಾಗವತಿಕೆಯನ್ನು, ಕುಣಿತವನ್ನು ಹೇಳಿ ಕೊಡುತ್ತಿದ್ದರು. ಅಪ್ಪಯ್ಯನ ಮತ್ತು ವಾಸುದೇವ ದೊಡ್ಡಪ್ಪಯ್ಯನ ಗುರುಗಳು ಅವರೇ.  ಆಗ ಮಾರ್ವಿಯ ರಾಮಕೃಷ್ಣ ಹೆಬ್ಬಾರರೂ, ಅವರ ತಮ್ಮ ವಾದಿರಾಜ ಹೆಬ್ಬಾರರೂ, ಚೋರಾಡಿ ಬಚ್ಚು ಶೆಟ್ಟಿ, ಕಲ್ಲಟ್ಟೆ ಸದಿಯಣ್ಣ ಮೊದಲಾದವರು ಪ್ರತೀ ದಿನ ಸಂಜೆಗೆ ಯಕ್ಷಗಾನ ಕಲಿಯಲು ಬರುತ್ತಿದ್ದರು.

 ನನ್ನ ಅತ್ತೆಯವರಾದ ಭವಾನಿಯನ್ನು, ಆಗಿನ ಕಾಲದ ಎಲ್ಲ ಹರೆಯ ಹೆಣ್ಣುಮಕ್ಕಳಂತೆ,  ಬುದ್ದಿ ಬರುವ ಮೊದಲೇ ಅಂದರೆ ಎಳೆಯ ಪ್ರಾಯದಲ್ಲಿ ಅಂದಾಜು ಹತ್ತು ಹನ್ನೆರಡು ವರ್ಷಕ್ಕೆ ಪರಿಚಿತರಾದ ಮಾರ್ವಿಯ ರಾಮಕೃಷ್ಣ ಹೆಬ್ಬಾರರಿಗೆ ಕೊಟ್ಟು ಮದುವೆ ಮಾಡಿದ್ದರು. ಮಾವ ರಾಮಕೃಷ್ಣ ಹೆಬ್ಬಾರರು ಮೇಳದಲ್ಲಿ ದಶಾವತಾರಿ ಎಂದು ಹೆಸರು ಗಳಿಸಿದವರಾದರೂ ವೈಯಕ್ತಿಕ ಜೀವನದಲ್ಲೂ ಬಹಳ ರಸಿಕರಾಗಿದ್ದರು. ವಯಸ್ಸಿಗೆ ಬರುತ್ತಿದ್ದಂತೆಯೇ ಒಂದೆರಡು ಉಪಪತ್ನಿಯರೂ ಅವರಿಗಿದ್ದರು. ಅವರನ್ನೆಲ್ಲ ಧೈರ್ಯವಾಗಿ ಮನೆಗೂ ಕರೆದುಕೊಂಡು ಬರುತ್ತಿದ್ದರಂತೆ. ಇದರಿಂದ ಅತ್ತೆಗೆ ಬೇಸರವಾಗಿ ಕೆಲವೊಮ್ಮೆ ಆಕ್ಷೇಪಿಸಿ ಗಲಾಟೆಯನ್ನೂ ಮಾಡಿದರಂತೆ. ಆದರೆ ಮಾವಯ್ಯ ಕ್ಯಾರೇ ಅನ್ನಲಿಲ್ಲ. ಕೆಟ್ಟ ಚಾಳಿ ಬಿಡಲೂ ಇಲ್ಲ.

ನಮ್ಮ ಅತ್ತೆ ಸ್ವಲ್ಪ ಸಪೂರವಾದ ಕುಳ್ಳಗಿನ ಆಳಾದರೂ, ಬಿಳಿಯಾಗಿ ಉರುಟು ಮುಖವಿದ್ದು  ಗುಂಗುರು ಕೂದಲು ಇದ್ದು ತುಂಬಾ ಚೆಂದವಾದ ಯುವತಿಯಾಗಿದ್ದರು. ಆಗಲೇ ಹಾಡು ಹಸೆ ಕಲಿತಿದ್ದರು. ಸಮಯದಲ್ಲಿ ಅವರು ಮಾರ್ವಿಯ ಗಂಡನ ಮನೆಯಿಂದ, ಆಗಾಗ ಕುದುರುಮನೆಗೆ ಅಂದರೆ ತವರು ಮನೆಗೆ ಬಂದು ಹೋಗುವುದು ಮಾಡುತ್ತಿದ್ದರು. ಪಕ್ಕದಲ್ಲೇ ಇರುವ ಕಲ್ಲಟ್ಟೆಯ ತಮ್ಮ ಬೇಸಾಯದ ಮೇಲ್ವಿಚಾರಣೆಗೆ ಬರುತ್ತಿದ್ದ ಕಕ್ಕುಂಜೆಯ ಪಟೇಲರಾದ ಶಂಕರನಾರಾಯಣ ಅಡಿಗರು ಒಮ್ಮೆ ಅತ್ತೆಯನ್ನು ಕಂಡರು. ಅತ್ತೆಯೂ ಕಂಡರು. ನೋಟ ಮಾತಾಯಿತು. ನಮ್ಮ ಅತ್ತೆಗೂ ಅವರಿಗೂ ಸ್ನೇಹವಾಗಿ ಪ್ರೀತಿಯೂ ಬೆಳೆಯಿತು. ಅತ್ತೆ ತವರಿಗೆ ಬರುವುದು ಹೆಚ್ಚಾಯಿತು. ಹಿರಿಯರಿಗೂ ಅದು ಗೊತ್ತಾಗಿ ವಿರೋಧಿಸಿದರು, ಆದರೆ ಅ ಅಡಿಗರು ತುಂಬಾ ಶ್ರೀಮಂತರೂ, ಮೇಲಾಗಿ ಪ್ರಭಾವಿಗಳೂ ಆದುದರಿಂದ ವಿರೋಧದ ನಡುವೆಯೇ ಕಲ್ಲಟ್ಟೆಯಲ್ಲಿ ಒಂದು ದೊಡ್ಡ ಉಪ್ಪರಿಗೆಯ ಮನೆಯನ್ನು ಕಟ್ಟಿಸಿ, ಅತ್ತೆಯವರನ್ನು ಅಲ್ಲಿಯೇ ಇರಿಸಿದರು. ಕಾಲಕ್ರಮೇಣ ನಮ್ಮ ಮನೆಯವರೆಲ್ಲರೂ ವೈಮನಸ್ಸು ಮರೆತು, ಕಲ್ಲಟ್ಟೆಯ ಅವರ ಮನೆಗೆ ಹೋಗಿ ಬರಲು ಶುರುಮಾಡಿದರು.

ಇನ್ನು ನನ್ನ ದೊಡ್ಡಪ್ಪ ವಾಸುದೇವ ಉಪ್ಪೂರರ ಮದುವೆಯ ಕತೆಯೂ ಕುತೂಹಲಕಾರಿಯಾದದ್ದು. ದೂರದ ಸಂಬಂಧಿಗಳಾದ ಗುಡ್ಡಟ್ಟು ಹತ್ತಿರದ ಒಂದು ಹಳ್ಳಿಯಲ್ಲಿ ಬಡತನದಲ್ಲಿರುವ ಮಂಜಯ್ಯ ಹೆಗಡೇ ಎಂಬವರು ಅವರ ಮಗಳು ಸುಭದ್ರೆಯನ್ನು ಹಣದ ಆಸೆಗಾಗಿ ವಯಸ್ಸಾದ ಉಬ್ಬಸ ಕಾಯಿಲೆಯಿರುವ ಒಬ್ಬ ಶ್ರೀಮಂತ ವರನಿಗೆ ಕೊಟ್ಟು ಮದುವೆ ಮಾಡಲು ದಿನನಿಶ್ಚಯ ಮಾಡಿದ್ದರು.  ಹೇಳಿಕೆ ಬಾರದೇ ಇದ್ದರೂ ಇದು ನಮ್ಮ ಅತ್ತೆ ಭವಾನಿಯಮ್ಮ ಸಂಬಂಧಿಕರಾದ ಸೀತಾರಾಮ ಹೆಬ್ಬಾರರು ಇವರಿಗೆ ಹೇಗೋ ಗೊತ್ತಾಯಿತು. ’ಹುಡುಗಿ ಚೆನ್ನಾಗಿದ್ದಾಳೆ’ ಆವಳನ್ನು ಮುದುಕನಿಗೆ ಕೊಟ್ಟು ಮದುವೆ ಮಾಡುವುದಾ? ಏನಾದರೂ ಮಾಡಿ ಇದನ್ನು ತಪ್ಪಿಸಬೇಕು’ ಎಂದು ಕಂಕಣಬದ್ದರಾದರು. ಮದುವೆಯ ಹಿಂದಿನ ರಾತ್ರಿ, ಒಂದು ನಾಲ್ಕು ಜನರನ್ನು ಕರೆದುಕೊಂಡು ಮಂಜಯ್ಯ ಹೆಗಡೆಯವರ ಮನೆಗೆ ಹೋದರು, ಅವರಿಗೆ ಗೊತ್ತಾಗದ ಹಾಗೆ ಹುಡುಗಿಯನ್ನು ಹಿಡಿದು, ಬಾಯಿಕಟ್ಟಿ ಹೊತ್ತುಕೊಂಡು  ತಂದೇ ಬಿಟ್ಟರು. ರಾತ್ರಿ ಸೂಡಿಯ ಬೆಳಕಿನಲ್ಲಿ ಗುಡ್ಡ ಹಾಡಿ ದಾಟಿ ಬರುವಾಗ ಕಾಲುಜಾರಿ ಬಿದ್ದು ಆ ಹುಡುಗಿಯನ್ನು ಬೀಳಿಸಿದ್ದೂ ಆಯಿತು. ಕೊನೆಗೆ ಬೆಳಕು ಹರಿಯುವುದರ ಒಳಗೆ ಮನೆ ತಲುಪಿ ನನ್ನ ದೊಡ್ಡಪ್ಪ ವಾಸುದೇವನಿಂದ ಸುಭದ್ರೆಗೆ ನಮ್ಮ ಮನೆಯಲ್ಲಿ ಆಸುಪಾಸು ನಾಲ್ಕು ಜನರ ಸಾಕ್ಷಿಯಾಗಿ ತಾಳಿ ಕಟ್ಟಿಸಿಯೂ ಆಯಿತು.

ಮರುದಿನ ಗುಡ್ಡಟ್ಟಿನಲ್ಲಿ ಹುಡುಗಿಯವರ ಮನೆಯವರಿಗೆ ವಿಷಯ ತಿಳಿಯಿತು. ನಮಗೇ ಹೀಗೆ ಮಾಡಿದರಲ್ಲ ಎಂದು ಅಬ್ರ ಹಾಕಿ ಕುಣಿದದ್ದೇ ಕುಣಿದದ್ದು. ಗಲಾಟೆಯೋ ಗಲಾಟೆ. ಗೊತ್ತುಮಾಡಿದ ವರನ ಕಡೆಯವರೂ ಹಣವುಳ್ಳ ಪ್ರಭಾವಶಾಲಿಗಳೆ ಆಗಿದ್ದರಲ್ಲ. ಪೋಲೀಸರಿಗೆ ಕಂಪ್ಲೆಂಟ್ ಕೊಡುತ್ತಾರೆ, ಕೋರ್ಟಿನಲ್ಲಿ ಕೇಸು ಹಾಕುತ್ತಾರೆ ಎಂದು ಸುದ್ದಿಯೂ ಬಂತು. ಕೊನೆಗೆ ಅತ್ತೆ ಭವಾನಿಯಮ್ಮ ತಮ್ಮ ಗಂಡ, ಕಕ್ಕುಂಜೆ ಅಡಿಗರ ಮೊರೆಹೋದರು. ’ಏನು ಮಾಡುವುದು ಆದದ್ದು ಆಗಿಹೋಯಿತು, ಏನಾದರೂ ಮಾಡಿ. ಮರ್ಯಾದೆ ಉಳಿಸಿ’ ಎಂದರು. ಆ ವರೆಗೆ ಗುಟ್ಟಾಗಿ ನಡೆದ ಇವರ ಕಾರುಬಾರ ಕಂಡು ಅಡಿಗರು ನಕ್ಕು, “ಇರಲಿ. ನಾನು ನೋಡಿಕೊಳ್ಳುತ್ತೇನೆ” ಎಂದರು. ಅಮೇಲೆ ಅವರು ಅದೇನು ಮಾಡಿದರೋ ಅಂತೂ ಅವರ ಪ್ರಭಾವದಿಂದ ಎಲ್ಲವೂ ತಣ್ಣಗಾಯಿತು. ಅಂತೂ ದ್ವಾಪರದ ಸುಭದ್ರಾ ಕಲ್ಯಾಣ ಮತ್ತೊಮ್ಮೆ ನಮ್ಮ ಮನೆತನದಲ್ಲಿಯೂ ನಡೆದುಹೋಯಿತು.

ನಮ್ಮ ಅಪ್ಪಯ್ಯನ ಮದುವೆ ಮಾತ್ರಾ ಸರಳವಾಗಿಯೇ ನಡೆಯಿತು.  ’ಮದುವೆಯಾದರೆ ತನ್ನನ್ನೇ ಮದುವೆಯಾಗುವುದು’ ಎನ್ನುತ್ತಿದ್ದ  ಗುರುತು ಪರಿಚಯ ಇದ್ದ ಕೆಳಮಾರ್ವಿಯ ಸುಬ್ರಾಯ ಹೆಬ್ಬಾರರ ಒಬ್ಬಳೇ ಮಗಳು, ಬಾಲ್ಯದಲ್ಲೇ ತಾಯಿ ತಂದೆಯನ್ನು ಕಳೆದುಕೊಂಡು ತಬ್ಬಲಿಯಾದ ಹದಿಮೂರು ವರ್ಷದ ಮುಗ್ದೆ ವೆಂಕಮ್ಮನನ್ನು ಹಿರಿಯರ ತೀರ್ಮಾನದಂತೆ ಮದುವೆಯಾದರು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ