ಸೋಮವಾರ, ಸೆಪ್ಟೆಂಬರ್ 18, 2017

*ನನ್ನೊಳಗೆ*
ಭಾಗ 6
ಅಪ್ಪಯ್ಯ ಮಳೆಗಾಲದಲ್ಲಿ ಕೆಲವೊಮ್ಮೆ ಆಟ, ತಾಳಮದ್ದಲೆ ತಿರುಗಾಟ ಇಲ್ಲದೇ ಇರುವಾಗ ಮನೆಯಲ್ಲೇ ಇರುತ್ತಿದ್ದರು. ಅವರು ಇದ್ದಾಗ ಸಂಜೆ ಮನೆಯಲ್ಲಿ ದೀಪ ಹಚ್ಚಿದ ಕ್ಷಣದಿಂದ ರಾತ್ರಿ ಮಲಗುವವರೆಗೂ ನಮ್ಮ ಮನೆಯಲ್ಲಿ ಭಾಗವತಿಕೆ, ಮದ್ದಲೆಗಳದೇ ಸದ್ದು. ಆಗಲೇ ಅನ್ನ ಮತ್ತು ಒಲೆಯ ಬಿಳಿಬೂದಿಯಿಂದ ಬೋನ ತಯಾರಿಸಿ ಮದ್ದಲೆಯ ಬಲಕ್ಕೆ ಹಚ್ಚಿ, ಒಲ ತೆಗೆದು  ನಮ್ಮನೆಯ ಚಾವಡಿಯಲ್ಲಿ ಕುಳಿತು ಸುರೇಶಣ್ಣ, ಗೌರೀಶಣ್ಣ ಮದ್ದಲೆ ಬಾರಿಸಲು ಸಿದ್ಧರಾದರೆ, ಅಪ್ಪಯ್ಯ ಸ್ವಲ್ಪ ದೂರದಲ್ಲಿ ಕುಳಿತು ಹೇಳಿ ಕೊಟ್ಟಂತೆ ಶ್ರೀಧರಣ್ಣಯ್ಯ ಭಾಗವತಿಕೆ ಮಾಡುವುದು. ನಾನು ಚಿಕ್ಕವ ಹಾರ್ಮೋನಿಯಂ ಬಾರಿಸುವುದು. ಆಗ ನಮ್ಮ ಮನೆಯ ವಾತಾವರಣ ಸುಮಾರಿಗೆ ಗಂಧರ್ವ ಲೋಕಕ್ಕೆ ಏನೂ ಕಡಿಮೆ ಇರುತ್ತಿರಲಿಲ್ಲ. ಒಮ್ಮೊಮ್ಮೆ ಆಚೀಚೆ ಮನೆಯವರೂ ಬಂದು ಕೇಳುತ್ತಾ ಕುಳಿತುಕೊಳ್ಳುವುದಿತ್ತು. ರಾತ್ರಿ ಅಮ್ಮ ಕಾದೂ ಕಾದೂ ಸಾಕಾಗಿ “ ಹಂಗಾರೆ ಊಟ ಮಾಡಿ ಮುಂದುವರ್ಸೂಕಾಗ್ದಾ?” ಎಂದಾಗಲೇ ನಮಗೆ ಸಮಯದ ಅರಿವಾಗುವುದು. ಅಪ್ಪಯ್ಯ, ಮಧ್ಯ ಮಧ್ಯ ಹಾಡುಗಳನ್ನು ನಿಲ್ಲಿಸಿ ಆ ಪದ್ಯದ ಸಂದರ್ಭ, ರಾಗ, ಆಲಾಪನೆಗಳನ್ನು ಬಿಡಿಸಿ ಬಿಡಿಸಿ ಹೇಳುತ್ತಿದ್ದರು. ಹಾಗೂ ಆ ಪದ್ಯಗಳಿಗೆ ಅವರು ನೋಡಿದ ಅರ್ಥದಾರಿಗಳು ಹೇಗೆ ಅಭಿನಯ ಮಾಡುತ್ತಿದ್ದರು? ಯಾವ ರೀತಿ ಅರ್ಥ ಹೇಳುತ್ತಿದ್ದರು? ಎಂದು ವಿವರಿಸುತ್ತಿದ್ದರು. ಕೆಲವೊಮ್ಮೆ ಮೇಳದಲ್ಲಿ ನಡೆದ ವಿನೋದದ ಪ್ರಸಂಗಗಳನ್ನು ನೆನಪಿಸಿಕೊಂಡು ಹೇಳುತ್ತಿದ್ದರು.     

ಅಪ್ಪಯ್ಯ ಬೆಳಿಗ್ಗೆ ಬೇಗನೇ ಏಳುವುದು. ಮನೆಯಲ್ಲಿ ಅವರ ಡ್ರೆಸ್ ಎಂದರೆ ಸೊಂಟಕ್ಕೆ ಒಂದು ಪಾಣಿಪಂಚೆ. ಹೆಗಲಲ್ಲೊಂದು ಶಾಲು, ಅಷ್ಟೆ. ಐದುವರೆ ಆರಕ್ಕೇ ಎದ್ದರೆ ಆ ನಸುಬೆಳಕಿನಲ್ಲಿ  ನಮ್ಮ ಬೈಲು ಮತ್ತು ಬೆಟ್ಟಿನ ಎಲ್ಲಾ ಗದ್ದೆಯ ಅಂಚುಗಳಲ್ಲಿ ಹಾಡಿಯ ಮೂಲೆ ಮೂಲೆಗಳಲ್ಲಿ ನಡೆದು ಒಂದು ಸರ್ಕೀಟ್ ಹೊಡೆಯಬೇಕು. ನಂತರ ದೂರದ ಹಾಡಿಯ ಹಳುವಿನ ಮರೆಯಲ್ಲಿ ಕುಳಿತು, ದೇಹ ಬಾಧೆ ಮುಗಿಸಿ, ಮೇಲಿನ ದೊಡ್ಡ ಕೆರೆಯಲ್ಲಿ ಇಳಿದು ಶುಚಿ ಮಾಡಿಕೊಳ್ಳಬೇಕು. ಅಲ್ಲೆ ಮೇಲ್ಬದಿಯಲ್ಲಿ ಇದ್ದ ಬೆಳ್ಳನ ಮನೆಯ ಹೊರಗೆ ನಿಂತು, ಅವನ ಹೆಂಡತಿಯನ್ನು ಕರೆದೂ “ಬಾಯಿ,  ಹುಷಾರಿದ್ಯಾ? ಮಕ್ಳೆಲ್ಲ ಹ್ಯಾಂಗಿದ್ದೋ? ಎಂತ ಮಾಡ್ತೊ?” ಎಂದು ವಿಚಾರಿಸಿಕೊಳ್ಳುವುದು, ಹಾಗೇ ಅಡಿಕೆ ತೆಂಗಿನ ತೋಟದ ಬದಿಯಲ್ಲೇ, ಎಲ್ಲ ಮರದ ತಲೆಯನ್ನು, ಬುಡವನ್ನು ನೋಡುತ್ತಾ ನಡೆದು ಬರುವುದು. ಬರುವಾಗ ಒಂದು ಗೋವೆ ಎಲೆಯನ್ನೋ, ಮಾವಿನ ಎಲೆಯನ್ನೋ ಕೊಯ್ದು, ಅದರ ದಂಟನ್ನು ಹರಿದು ಬೇರ್ಪಡಿಸಿ ಚೆನ್ನಾಗಿ ಸುತ್ತುವರು. ನಂತರ ಅದರ ತುದಿಯನ್ನು ಬಾಯಿಯಲ್ಲಿ ಕಚ್ಚಿ ಹರಿದು ಉಗಿದು, ಉಳಿದ ಭಾಗದಲ್ಲಿ ಹಲ್ಲನ್ನು ಚೆನ್ನಾಗಿ ಉಜ್ಜುವರು. ನಂತರ ಅದೇ ಎಲೆಯ ದಂಟಿನಿಂದ ನಾಲಿಗೆಯನ್ನೂ ಕೀಸಿ ಸ್ವಚ್ಛಗೊಳಿಸಿಕೊಳ್ಳುವುದು. ನಂತರ ಮನೆಗೆ ಬಂದು ಕಾಫಿಯ ಸೇವನೆ. ಅವರು ಮನೆಯಲ್ಲಿ ಇದ್ದರೆ ನಾನೂ ಅವರ ಬಾಲವೇ. ಅವರು ಹೋದಲ್ಲೆಲ್ಲಾ ಹೋಗುತ್ತಿದ್ದೆ.

 ಹಾಗೆಯೇ ತೋಟದಲ್ಲಿ ಗುಡ್ಡೆಯಲ್ಲಿ ತಿರುಗುವಾಗ ಎಲ್ಲಾದರೂ ಸಿಕ್ಕಿದ ಮೊಳಕೆ ಬಂದ ಹಲಸಿನಬೀಜವೋ, ಮಾವಿನ ಗೊರಟೋ ಅಥವ ಗೋವೆಬೀಜವೋ ಸಿಕ್ಕರೆ, ಅದನ್ನು ಜಾಗ್ರತೆಯಾಗಿ ಕೈಯಲ್ಲಿ ಹಿಡಿದು ಮನೆಗೆ ತಂದರು. ನಂತರ ಹಟ್ಟಿಯಲ್ಲಿ ಇರುವ ಗೊಬ್ಬರವನ್ನು ಒಂದು ಹೆಡಗೆಯಲ್ಲಿ (ಬುಟ್ಟಿ) ತುಂಬಿಕೊಂಡು, ಗುಡ್ಡೆಯಲ್ಲೋ, ತೋಟದ ಎತ್ತರ ಜಾಗದಲ್ಲೋ ಸ್ವಲ್ಪ ಮಣ್ಣು ಅಗೆದು ಅದನ್ನು ನೆಟ್ಟು, ಮೇಲೆ ಸ್ವಲ್ಪ ಗೊಬ್ಬರ ಹಾಕಿ ಮಣ್ಣು ಮುಚ್ಚಿ ಬರುವರು. ಹಾಗಾಗಿ ಅವರು ಅಂದು ನೆಟ್ಟ ಎಷ್ಟೋ ಮಾವಿನ ಗಿಡಗಳೆ, ಗೋವೇ, ಹಲಸಿನ ಗಿಡಗಳೇ ಮರಗಳಾಗಿ ಇಂದು ಅಪ್ಪಯ್ಯನ ನೆನಪಿನೊಂದಿಗೆ ಫಲ ಕೊಡುತ್ತಿವೆ.

ಸುಮಾರು ಹತ್ತು ಗಂಟೆಯ ಹಾಗೆ ಕಲ್ಲಟ್ಟೆಯ ಮನೆಯಲ್ಲಿರುವ ಅವರ ಅಕ್ಕ ಅಂದರೆ ನನ್ನ ಅತ್ತೆಯ ಮನೆಗೆ ಹೋಗಿ ಮಾತಾಡಿಸಿ ಬರುತ್ತೇನೆ ಎಂದು ಹೊರಟರೆ ಪುನಃ ನಾನು ಅವರ ಬಾಲವಾಗಿ ಅವರೊಂದಿಗೆ ಹೊರಡುತ್ತೇನೆ. ದಾರಿಯಲ್ಲಿ ಸಿಗುವ ಊರಿನ ಕೆಲವರು, “ಅಯ್ಯಾ ಮನಿಗ್ ಬಂದೀರ್ಯಾ? ಇವತ್ತು ರಜಿಯಾ? ನಾಳೆ ಎಲ್ ಆಟ? ಎಂತಾ ಪ್ರಸಂಗ?” ಎಂದು ಕೇಳಿದರೆ, ಅಪ್ಪಯ್ಯ ನಕ್ಕು ತಾಳ್ಮೆಯಿಂದ ಅವರಿಗೆ ಉತ್ತರಿಸುತ್ತಾರೆ. ಅತ್ತೆಯನ್ನು ಮಾತಾಡಿಸಿ ಸುಖ ಕಷ್ಟ ವಿಚಾರಿಸಿ ಕೈಯಲ್ಲಿ ಹಣವಿದ್ದರೆ ಅಕ್ಕನ ಕೈಯಲ್ಲಿ ಇರಿಸಿ, ಮನೆಯ ದಾರಿ ಹಿಡಿದರೆ, ಮಧ್ಯಾಹ್ನದ ಹೊತ್ತಿಗೆ ಮನೆಗೆ ಬಂದು ಊಟ. ನಂತರ ಸ್ವಲ್ಪ ಹೊತ್ತು ಮಲಗಿದರೆ. ಸಂಜೆ ಎದ್ದು ಕಾಫಿ ಗೀಪಿ ಕುಡಿದು ಅದೂ ಇದೂ ಮಾತಾಡಿ ಮೇಳದ ಕ್ಯಾಂಪ್ ಎಲ್ಲಿದೆಯೋ ಅಲ್ಲಿಗೆ ಹೊರಡುತ್ತಾರೆ. ಒಟ್ಟಾರೆ ಅಪ್ಪಯ್ಯ ಮತ್ತು ಅವರ ದಿನಚರಿ ವ್ಯಕ್ತಿತ್ವ ನನಗೆ ಆದರ್ಶ.  ಎಲ್ಲಾ ಮಕ್ಕಳಿಗೂ ತಂದೆಯೆಂದರೆ ಹಾಗೆಯೇ ಇರಬಹುದು. ಇರಲಿ.

 ಐದು ವರ್ಷ ತುಂಬಿದ ಕೂಡಲೆ, ನನ್ನನ್ನು, ನನ್ನ ಒತ್ತಿನ ಅಣ್ಣ ಗೌರೀಶ, ಸುರೇಶರೊಂದಿಗೆ ಎರಡು ಮೈಲಿ ದೂರದ ಗೋರಾಜಿ ಶಾಲೆಗೆ ಸೇರಿಸಿದರು. ಬಹುಷ್ಯ ನನ್ನ ಅವತಾರ ಹೀಗಿತ್ತು. ದೊಗಲೆ ಚಡ್ಡಿ, ಕಾಲಿನ ತನಕದ ದೊಡ್ಡದಾಗಿ ಇಳಿಬಿಟ್ಟ ಚೀಲ, ಮೂಗಿನಲ್ಲಿ ಸಿಂಬಳ. ಶಾಲೆಯೆಂದರೆ ಅದು ಗೋರಾಜಿ ನಾಗಪ್ಪ ಮಯ್ಯರ ಮನೆಯ ಪಡುಬದಿಯ ಒಂದು ಸಣ್ಣ ಕೋಣೆ. ಮನೆಯ ಎದುರು ದೊಡ್ಡ ದೊಡ್ಡ ಬೈಲು ಗದ್ದೆಗಳು. ಸಾಕಷ್ಟು ಎತ್ತರವೂ ಇಲ್ಲದ ಇಕ್ಕಟ್ಟು ಇಕ್ಕಟ್ಟು ಜಾಗ. ಆ ಕೋಣೆಗೆ ಒಂದು ಬದಿ ಕಿಟಕಿಯೇ ಇರಲಿಲ್ಲವೆಂದು ನೆನಪು. ಒಂದು ದೊಡ್ಡ ಪತ್ತಾಸಿನ ತುಂಬಾ ಏನೇನೋ ಮಕ್ಕಳ ಪುಸ್ತಕಗಳು. ಮನೆಯ ಪಕ್ಕದ ಮಕ್ಕಿ ಗದ್ದೆಯೇ ನಮ್ಮ ಆಟದ ಮೈದಾನ. ಹತ್ತಿರದಲ್ಲೇ ಒಂದು ಗೋಪಾಲಕೃಷ್ಣ ದೇವಸ್ಥಾನ. ಒಬ್ಬರೇ ಮೇಷ್ಟ್ರು, ಅವರು ಬಾಲಕೃಷ್ಣ ಶೆಟ್ರು. ಬಹಳ ಒಳ್ಳೆಯ ಮೇಷ್ಟ್ರು. ಆಗಾಗ ನಮ್ಮ ಮನೆಗೂ ಬರುತ್ತಿದ್ದರು. ಅವರಿಗೆ ಯಕ್ಷಗಾನದ ಹುಚ್ಚು. ನಮ್ಮ ಶ್ರೀಧರ ಅಣ್ಣಯ್ಯನಿಂದ ಅವರು ಸ್ವಲ್ಪ ಕುಣಿತವನ್ನೂ ಕಲಿತಿದ್ದರಂತೆ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ