ಬುಧವಾರ, ಸೆಪ್ಟೆಂಬರ್ 27, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 15

 ಗುಂಡ್ಮಿ ದಿ. ಕಾಳಿಂಗ ನಾವಡರು, ಗುಂಡ್ಮಿ ಸದಾನಂದ ಐತಾಳರು, ಕೆ. ಜಿ. ರಾಮರಾಯರು, ಸುಬ್ರಹ್ಮಣ್ಯ ದಾರೇಶ್ವರ, ಕೆ.ಪಿ. ಹೆಗಡೆ, ಆರ್. ಪಿ, ಹೆಗಡೆ, ನಾರಾಯಣ ಶಬರಾಯ, ಬೈಲೂರು ಸುಬ್ರಮಣ್ಯ ಐತಾಳರು, ವಿಶ್ವೇಶ್ವರ ಸೋಮಯಾಜಿಗಳು, ಕೊಳಗಿ ಕೇಶವ ಹೆಗಡೆ, ವಿಷ್ಣು ಹೆಗಡೆ, ಹಾಲಾಡಿ ರಾಘವೇಂದ್ರ ಮಯ್ಯ ಮೊದಲಾಗಿ, ಇಂದು ಭಾಗವತರಾಗಿ ಮೆರೆಯುತ್ತಿರುವ ಹೆಚ್ಚಿನವರೆಲ್ಲ ಹಂಗಾರಕಟ್ಟೆಯ ಭಾಗವತಿಕೆ ಕೇಂದ್ರದ ಕೊಡುಗೆಯ, ಅಪ್ಪಯ್ಯನ ಶಿಷ್ಯರೆ.

ಅದೇ ಸಮಯದಲ್ಲಿ ನನ್ನ ಅಕ್ಕನ ಮಗ ವೆಂಕಟೇಶ, ಗಿಳಿಯಾರು ಶಾಲೆಯಲ್ಲಿ ಓದುತ್ತಿದ್ದ. ಹೆಚ್. ಶ್ರೀಧರ ಹಂದೆಯವರು ಮತ್ತು ಕಾರ್ಕಡ ಶ್ರೀ ನಿವಾಸ ಉಡುಪರು ಗಿಳಿಯಾರು ಶಾಲೆಯ ವಾರ್ಷಿಕೋತ್ಸವಕ್ಕೆ ಒಂದು ಯಕ್ಷಗಾನ ಮಾಡುವ ಯೋಚನೆ ಮಾಡಿ, ಮಕ್ಕಳಿಗೆ ಕುಣಿತ ಹೇಳಿಕೊಟ್ಟು ಟ್ರಯಲ್ ಮಾಡಿಸುತ್ತಿದ್ದರು. ನಾನೂ ಅವನ ಜೊತೆಗೆ ಟ್ರಯಲ್ ಗೂ ಹೋಗುತ್ತಿದ್ದೆ. ಹಾಗಾಗಿ ನನ್ನನ್ನೂ ಕರೆದು ನೀನೂ ಒಂದ್ ವೇಷ ಮಾಡ್ತೀಯಾ? ಎಂದು ವೇಷ ಮಾಡಲು ಅವಕಾಶ ಮಾಡಿಕೊಟ್ಟರು.ನಾನು ಒಪ್ಪಿ ಮಾಡಿದೆ. ರತ್ನಾವತಿ ಕಲ್ಯಾಣ ಪ್ರಸಂಗ. ವೆಂಕಟೇಶನ ಭದ್ರಸೇನ, ಮೋಹನದಾಸ ಶ್ಯಾನುಭೋಗನ ಹಾಸ್ಯ, ಅವನ ಅಣ್ಣ ಗಣೇಶ ಶ್ಯಾನುಭೋಗನ ವತ್ಯಾಖ್ಯ. ಗಿರೀಶ ಹಂದೆಯ ರತ್ನಾವತಿ ಮಂಜುನಾಥ ಐತಾಳನ ಚಿತ್ರಕೇತ, ಅವನ ಅಣ್ಣ ದಿನೇಶ ಹಂದೆಯ ದೃಢವರ್ಮ. ನನ್ನದು ಕಿರಾತ, ವಿಂದ್ಯಕೇತ. ನಾನೂ ಅಲ್ಪಸ್ವಲ್ಪ ಕುಣಿತ ಕಲಿತಿದ್ದರೂ ಶ್ರೀಧರ ಹಂದೆಯವರು ಕುಣಿತದ ಅಂಗ ಆಕಾರವನ್ನು ಚಂದ ಮಾಡಿದರು. ಮಾತು, ಗತ್ತು ಗಾಂಭೀರ್ಯ ಕಲಿಸಿದರು.

ಅದೇ ಕಾಲದಲ್ಲಿ ಕಾರ್ಕಡ ಶ್ರೀನಿವಾಸ ಉಡುಪರು ಮತ್ತು ಹೆಚ್. ಶ್ರೀಧರ ಹಂದೆಯವರೂ ಸೇರಿ ಸಾಲಿಗ್ರಾಮ ಮಕ್ಕಳ ಮೇಳವನ್ನು ಪ್ರಾರಂಭಿಸಿದರು. ನಾನೂ ಮಕ್ಕಳ ಮೇಳದಲ್ಲಿ ಎರಡು ಮೂರು ವರ್ಷ ವೇಷ ಮಾಡಿದ್ದೆ. ವೃಷಸೇನದಲ್ಲಿ ಭೀಮ, ದ್ರುಪದ ಗರ್ವಭಂಗದಲ್ಲಿ ದ್ರೋಣ, ಕೃಷ್ಣಾರ್ಜುನದಲ್ಲಿ ಬಲರಾಮ ಇತ್ಯಾದಿ ವೇಷವನ್ನೂ ಮಾಡಿ ಬೆಂಗಳೂರು, ಧಾರವಾಡ, ಉಡುಪಿ, ಶಿವಮೊಗ್ಗ, ದಾವಣಗೆರೆ ಅಂತ ಹಲವಾರು ಕಡೆಗಳಲ್ಲಿ ಪ್ರದರ್ಶನವನ್ನೂ ಕೊಟ್ಟಿದ್ದೆವು. ಮೇಲೆ ತಿಳಿಸಿದವರಲ್ಲದೇ ಆಗ ಮಕ್ಕಳ ಮೇಳದಲ್ಲಿ ಸತೀಶ ಕಲ್ಕೂರ, ಸತೀಶ ಕಾಮತ್, ಸತೀಶ ತುಂಗ, ಮಹೇಶ ಉಡುಪ, ರಾಮದೇವ ಉರಾಳ, ಮಹಮ್ಮದ್ ರಫಿ, ಗುರುಪ್ರಸಾದ ಐತಾಳ, ನಂತರ ಮಹೇಶ ಅಡಿಗ ಸುರೇಶ ಅಡಿಗ ಮೊದಲಾದವರು ಇದ್ದರು. ಭಾಗವತರಾಗಿ ಸ್ವತಹ ಶ್ರೀಧರ ಹಂದೆಯವರೇ ಇದ್ದರೆ, ಮದ್ದಲೆಗಾರರಾಗಿ ಬಿರ್ತಿ ಬಾಲಕೃಷ್ಣ ಮತ್ತು ಚಂಡೆವಾದಕರಾಗಿ ಮಣೂರು ಮಾಧವ ಇದ್ದರು. ಎಲ್ಲವೂ ಶಿಸ್ತು ಎಲ್ಲರೂ ಶಿಸ್ತು. ದೂರದ ಊರಿಗೆ ಆಟಕ್ಕೆ ಹೋದರೆ ವಿಪರೀತ ತಿನ್ನಲು, ತಿರುಗಲೂ ನಿರ್ಭಂದ. ಆರೋಗ್ಯ ಕೆಡುತ್ತದೆ ಎಂದು. ಕಾಯಿಲೆಯಾದರೆ ಅಷ್ಟು ಮುತುವರ್ಜಿಯಿಂದ ಶುಶ್ರೂಷೆ. ವೇಷ ಮಾಡಿಕೊಂಡು ರಂಗಸ್ಥಳದಲ್ಲಿ ಕುಣಿದು ದಣಿದು ಚೌಕಿಗೆ ಬಂದರೆ ಗಾಳಿಹಾಕಲು ಗ್ಲೂಕೋಸ್ ಪುಡಿ ನೀರಿಗೆ ಹಾಕಿ ಕುಡಿಸಲು ಉಡುಪರು ಸಿದ್ಧವಾಗಿ ನಿಲ್ಲುತ್ತಿದ್ದರು. ಜೊತೆಗೆ " ಹ್ವಾ , ಬೆಸ್ಟ್ ಆಯ್ತ". ಅಂತ ಕೈ ತೋರುಬೆರಳು ಮುದ್ರೆ ಮಾಡಿ, ಬೆನ್ನು ತಟ್ಟಿ ಹುರಿದುಂಬಿಸುವುದು ಬೇರೆ.

ಬ್ರಹ್ಮಾವರ ಸುಬ್ಬಣ್ಣ ಭಟ್ಟರ ವೇಷಭೂಷಣದ ಜೊತೆಗೆ, ನಮಗೆ ಮುಖ ಬರೆದು ವೇಷ ಕಟ್ಟಿ ಬಿಡಲು, ಹಾರಾಡಿ ರಾಮಗಾಣಿಗರ ಮಗ ಸಂಜೀವಣ್ಣ, ಮೀಸೆ ಬಾಲಣ್ಣ, ಮರಿಯಾಚಾರ್, ಕೃಷ್ಣಸ್ವಾಮಿ ಜೋಯಿಸ್ ಮೊದಲಾದವರೂ ಇದ್ದರು.

ಆಗ ರಜೆಯಲ್ಲಿ ಪ್ರತೀದಿನ ಸಂಜೆ ಹೆಚ್. ಶ್ರೀಧರ ಹಂದೆಯವರ ಮನೆಯ ಎದುರಿನ ಅಂಗಳದಲ್ಲಿ ಅಥವ ಹಿಂದಿನ ಹಾಡಿಯ ಮಾವಿನ ಮರದ ಬುಡದಲ್ಲಿ ಟ್ರಯಲ್ ಮಾಡಿಸುತ್ತಿದ್ದರು. “ಮಕ್ಕಳೇ ಇದು ರಂಗಸ್ಥಳ” ಎಂದು ಕೈ ತೋರಿಸಿ ಸುತ್ತ ಒಂದು ಕಾಲ್ಪನಿಕ ರೇಖೆಯನ್ನು ಎಳೆದು, ಅದರ ಒಳಗೆ ನಮಗೆ ಕುಣಿತ ಅರ್ಥ ಹೇಳಿಕೊಡುತ್ತಿದ್ದರು. ಜೊತೆಗೆ ಶ್ರೀನಿವಾಸ ಉಡುಪರೂ ಇರುತ್ತಿದ್ದರು. ಅದೊಂದು ನನ್ನ ಜೀವನದಲ್ಲಿ ಮರೆಯಲಾರದ ಅನುಭವ. ಆ ಶಿಸ್ತು, ಹೀಗೆಯೇ ಆಗಬೇಕು ಎನ್ನುವ ಖಚಿತತೆ, ಕಲೆಯ ಬಗೆಗಿನ ಕಾಳಜಿ, ಹಾರಾಡಿ ರಾಮ ಹೀಗೆ ಕುಣಿಯುತ್ತಿದ್ದರು, ಹಾರಾಡಿ ಕುಷ್ಟ ಹೀಗೆ ಮುಖ ತಿರುಗಿಸಿ ಕೇದಗೆಮುಂದಲೆ ಜಗ್ಗನೇ ಮಿಂಚುವಂತೆ ಮಾಡುತ್ತಿದ್ದರು, ಕೊಕ್ಕರ್ಣೆ ನರಸಿಂಹ ಹೀಗೆ ಪಾತ್ರದ ಒಳಗೆ ತನ್ಮಯರಾಗಿ ಮಾತನಾಡುತ್ತಿದ್ದರು ಎಂದು ಮಧ್ಯ ಮಧ್ಯ ವಿವರಣೆ. ಕಲೆಯ ಬಗೆಗಿನ ಆ ಸ್ನೇಹಿತ ದ್ವಯರ ಕಾಳಜಿ ಗೌರವ, ತೊಡಗಿಸಿಕೊಳ್ಳುವಿಕೆ ಅನನ್ಯವಾದುದು. ಟ್ರಯಲ್ ನಡೆಯುತ್ತಿದ್ದಾಗ ಮಧ್ಯ ಅವರ ಮನೆಯಲ್ಲಿ ನಾವು, ಮಕ್ಕಳಿಗೆಲ್ಲಾ ಕಾಫಿತಿಂಡಿ ವ್ಯವಸ್ಥೆ ಆಗುತ್ತಿತ್ತು. ಅಲ್ಲಿ ಎರಡೋ ಮೂರೋ ವರ್ಷ ಮಾತ್ರ ಇದ್ದೆ. ನನಗೆ ಹಾಲಾಡಿಯಿಂದ ಟ್ರಯಲ್ ಗೂ ಹೋಗುವುದು ಕಷ್ಟವಾಯಿತು. ರಜೆಯಲ್ಲಿ ಮಾತ್ರ ಅಕ್ಕನ ಮನೆಯಲ್ಲಿ ಇದ್ದಾಗ  ಹೋಗಬಹುದಿತ್ತು. ಆದರೆ  ಆ ಮೇಳ ಅಮೇರಿಕಕ್ಕೆ ಹೋಗುವ ಹಿಂದಿನ ವರ್ಷ ನಾನು “ಎತ್ತರವಾಗಿಬಿಟ್ಟೆ” ಎಂದು ನಿವೃತ್ತಿಗೊಳಿಸಿದ್ದರಿಂದ ನನಗೆ ವಿದೇಶಕ್ಕೆ ಹೋಗುವ ಅವಕಾಶ ತಪ್ಪಿಹೋಯಿತು. ಈಗಲೂ ಆ ವಿಶ್ವವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳ ನಾವಿರುವಾಗ ಇದ್ದ ಅದೇ ಶಿಸ್ತು, ಕುಣಿತ, ಮಾತು, ಗತ್ತು, ಉಳಿಸಿಕೊಂಡು ಅದೇ ಮಟ್ಟದಲ್ಲಿ ಅಲ್ಲಲ್ಲಿ ಪ್ರದರ್ಶನ ನೀಡಿ ಯಕ್ಷಗಾನಕ್ಕೊಂದು ಮಾದರಿಯೆನಿಸಿದೆ. ನಾನೂ ಅದರಲ್ಲಿ ಇದ್ದಿದ್ದೇನೆ ಎಂಬುದೇ ನನಗೊಂದು ಹೆಮ್ಮೆಯ ವಿಷಯ.

ಆ ಒಂದು ಕೃತಜ್ಞತೆಯನ್ನು ಸಲ್ಲಿಸಲು ಪುನಹ ನಲವತ್ತು ವರ್ಷಗಳ ನಂತರ, ಮೊನ್ನೆ ೨೦೧೩ ರಲ್ಲಿ ಶ್ರೀಧರ ಹಂದೆಯವರನ್ನು, ಆಗಿನ ನಾವೆಲ್ಲಾ  ಮಕ್ಕಳು ಈಗ ಎಲ್ಲೆಲ್ಲೋ ಇದ್ದು ಜೀವನದ ದಾರಿಯನ್ನು ಕಂಡುಕೊಳ್ಳುತ್ತಿರುವವರು,  ದೊಡ್ಡವರಾಗಿ ಡಾಕ್ಟರ್ ಇಂಜಿನಿಯರ್ ಆಫೀಸರ್ ಆಗಿ ಎಲ್ಲೆಲ್ಲಿಯೋ ಇದ್ದವರನ್ನು  ಹುಡುಕಿ ಕರೆದು, ಪುನಹ ಸೇರಿಕೊಂಡು ಒಂದು ಲಕ್ಷದ ಮೊತ್ತವನ್ನು ಕೊಟ್ಟು ಗೌರವಿಸುವ ಕಾರ್ಯಕ್ರಮವನ್ನು ಏರ್ಪಡಿಸಿದ್ದೆವು. ನಾವು ಅಂದು ಆಡಿದ ಅದೇಪ್ರಸಂಗ ಅದೇ ಪಾತ್ರಧಾರಿಗಳು ಅದೇ ಪಾತ್ರವನ್ನು ಮಾಡಿ ಅವರ ಸಮ್ಮುಖದಲ್ಲಿ ಕೃಷ್ಣಾರ್ಜುನ, ವೃಷಸೇನ ಪ್ರಸಂಗಗಳನ್ನು ಪುನಹ ಅವರಿಂದಲೇ ಟ್ರಯಲ್ ಮಾಡಿಸಿಕೊಂಡು ಪ್ರದರ್ಶಿಸಿ ಗುರುವಂದನೆಯನ್ನು ಕೋಟದ ಹಿರೇ ಮಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಆಡಿ ಬಾಲ್ಯವನ್ನು  ಮತ್ತೊಮ್ಮೆ ಕಂಡೆವು. ನನ್ನ ಒಂದು ಮುತುವರ್ಜಿಯಿಂದ ಅದನ್ನು ಮಾಡಿದ್ದು ಎಂದು ಹೇಳಿಕೊಳ್ಳಲೂ ನನಗೆ ಹೆಮ್ಮೆಯಿದೆ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ