ಶನಿವಾರ, ಸೆಪ್ಟೆಂಬರ್ 16, 2017

*ನನ್ನೊಳಗೆ*
ಭಾಗ 4
ನಾನು ಹುಟ್ಟಿದ್ದು 1962 ರ ಅಗಸ್ಟ್ ಹದಿಮೂರರಂದು. ಆಗ ಮಾರಣಕಟ್ಟೆಯ ಮೇಳದ ಭಾಗವತರಾದ ಅಪ್ಪಯ್ಯನಿಗೆ ಭಾಗವತರು ಎಂಬ ಪ್ರಸಿದ್ಧಿ ಗೌರವಗಳಿದ್ದರೂ, ಕೈಯಲ್ಲಿ ಸಾಕಷ್ಟು ಹಣ ಓಡಾಡುತ್ತಿರಲಿಲ್ಲ. ಬಯಲಾಟವಾದ್ದರಿಂದ ಊರಿಂದ ಊರಿಗೆ ನಡೆದೇ ಹೋಗಬೇಕಾಗಿದ್ದು ಆವಾಗಾವಾಗಲೇ ಆಟ ನಿಶ್ಚಯವಾಗಬೇಕಾಗಿದ್ದುದರಿಂದ ಮೇಳದಲ್ಲಿ ಎಲ್ಲಾ ದಿನವೂ ಆಟವೂ ಸಿಗುತ್ತಿರಲಿಲ್ಲ. ಕೆಲವೊಮ್ಮೆ ಮೇಳವು ವರ್ಷಪೂರ್ತಿ ಸಾಗದೇ ಲುಕ್ಸಾನ್ ಆಗಿ ಮಧ್ಯದಲ್ಲೇ ಮನೆಗೆ ಬಂದದ್ದೂ ಇದೆ. ಮನೆ ತುಂಬಾ ಮಕ್ಕಳು. ಮೂರು ಜನ ಖಾಯಂ ಕೆಲಸದಾಳುಗಳು. ಜೊತೆಯಲ್ಲಿ ಉತ್ತರಕನ್ನಡದಿಂದ  ಮನೆಯಲ್ಲಿ ಹೇಳದೇ ಕೇಳದೇ ಓಡಿ ಬಂದು ನಮ್ಮ ಮನೆ ಸೇರಿಕೊಂಡು ತಾನಿನ್ನು ಈ ಮನೆಯಲ್ಲೇ ಇರುತ್ತೇನೆ” ಎನ್ನುವ ಚಂದ್ರಶೇಖರ ಭಟ್ರು. ಇವರು ನಾನು ಹುಟ್ಟುವ ಮೊದಲೇ ನನ್ನ ಅಣ್ಣನೇ ಆಗಿ ನಮ್ಮ ಮನೆಯಲ್ಲಿ ಬಂದು ಇದ್ದವರು. ಯಾವ ಜನ್ಮದ ಋಣವೋ ಏನೊ. ಅವರಿಗೆ ಉತ್ತರ ಕನ್ನಡದ ಕೊಪ್ಪಲತೋಟ ಎಂಬಲ್ಲಿ ಸ್ವಂತ ಮನೆ ಆಸ್ತಿಗಳು ಇತ್ತು. ಅಮ್ಮ ಅಪ್ಪಯ್ಯ ತಮ್ಮಂದಿರು ಎಲ್ಲಾ ಇದ್ದರು. ಬಹಳ ವರ್ಷಗಳ ನಂತರ ಆ ಮನೆಯವರಿಗೆ ಅವರು ಇಲ್ಲಿ ಇರುವುದು ಗೊತ್ತಾಗಿ ಅವರ ಅಪ್ಪಯ್ಯ ಅಮ್ಮ ಬಂದು ಕರೆದರೂ ಇವರು ಹೋಗಲಿಲ್ಲ. ಅಪ್ಪಯ್ಯನ ಜೊತೆ ಯಕ್ಷಗಾನ ಕಲಿತು ಅವರು ಹೋದ ಮೇಳಕ್ಕೇ ಹೋಗಿ, ವೇಷ ಮಾಡಿ ಮೇನೇಜರ್ ಆಗಿ ಮೇಳದ ಎಲ್ಲ ಕೆಲಸಗಳನ್ನೂ ಮಾಡಿದರು. ತಿರುಗಾಟ ಮಾಡಿದರು. ಮಳೆಗಾಲದಲ್ಲಿ ಮನೆಯ ಬೇಸಾಯ ಕೆಲಸಗಳಲ್ಲೂ ಸಹಾಯಕರಾಗಿ ನಮ್ಮ ಮನೆಯಲ್ಲೇ ಮನೆಯವರಂತೆಯೇ ಆಗಿ ಇದ್ದರು.

ಹಿರಿಯ ಅಣ್ಣ ದಾಮೋದರ ಮನೆಯ ಗದ್ದೆಯ ಕೆಲಸದಲ್ಲಿ ತೊಡಗಿಕೊಂಡ. ಎರಡನೇ ಅಣ್ಣ ಕೃಷ್ಣಮೂರ್ತಿ ಹಾಲಾಡಿ ಶಾಲೆಯಲ್ಲಿ ನಾಲ್ಕನೇ ಕ್ಲಾಸ್ ಓದಿ ಮುಗಿಸಿದವನು, ಎಂಟನೇ ಕ್ಲಾಸಿಗೆ ಶಂಕರನಾರಾಯಣಕ್ಕೆ ಹೋಗಲು ಸಿದ್ದನಾಗಿದ್ದರೂ ಪ್ರತೀದಿನ ಹಾಲಾಡಿ ಹೊಳೆ ದಾಟಲು ಒಂದು ಪಾವಾಣೆ ಕೊಡಲು ಇಲ್ಲದ್ದರಿಂದ ಮನೆಯಲ್ಲಿ  ‘ಮಾಣಿ, ಓದಿದ್ದು ಸಾಕು. ಇನ್ನು ಗಂಟಿ ಮೇಯಿಸು’ ಅಂದದ್ದೇ, ಮನೆಯಲ್ಲಿ ಹೇಳದೇ ಕೇಳದೇ ಬಸ್ಸು ಹತ್ತಿ ಮೈಸೂರಿಗೆ ಹೋದ. ಅವನನ್ನು ಹುಡುಕಿಸಿ ಊರಿಗೆ ಕರೆದುಕೊಂಡು ಬಂದರೂ ಕೊನೆಗೆ ಮತ್ತೊಮ್ಮೆ ಬೆಂಗಳೂರು ಸೇರಿ ಹೋಟೇಲಲ್ಲಿ ಕೆಲಸಕ್ಕಿದ್ದು, ಅಲ್ಲಿಯೇ ಜೀವನದ ದಾರಿ ಕಂಡುಕೊಂಡ. ಮತ್ತು ಮನೆಯಲ್ಲಿ ಅಜ್ಜಿ ಅಂದರೆ ಅಪ್ಪಯ್ಯನ ಅಮ್ಮ, ನನ್ನ ಅಮ್ಮ, ಓದುತ್ತಿರುವ ರಮೇಶ, ಶ್ರೀಧರ, ಸಣ್ಣ ಮಕ್ಕಳಾದ ಸುರೇಶ, ಗೌರೀಶ ಮತ್ತು ನಾನು. ಒಮ್ಮೆ ಮನೆಯಲ್ಲಿ ಊಟಕ್ಕೆ ಎಲ್ಲರೂ ಕುಳಿತರೆ ಇಡೀ ಅಡುಗೆ ಮನೆಯೇ ತುಂಬುವಷ್ಟು ಮಕ್ಕಳು.

ಅಪ್ಪಯ್ಯ ನವಂಬರ್ ಸುಮಾರಿಗೆ ಮೇಳಕ್ಕೆ ಹೋದರೆ ಆರು ತಿಂಗಳು ಮನೆಯಲ್ಲಿ ಇರುವುದಿಲ್ಲ. ಹಾಗಾಗಿ ಯಾವಾಗಲು ಮನೆಯಲ್ಲಿ ಹಣ ಇರುವುದಿಲ್ಲ ಎಂದು ಹಾಲಾಡಿಯ ಗೋಳಿಯವರ ಅಂಗಡಿಯಲ್ಲಿ ಲೆಕ್ಕಕ್ಕೆ ಬರೆದು ಮನೆಗೆ ಬೇಕಾದ ಜೀನಸಿ ಸಾಮಾನು ತರುವುದು. ನಂತರ ದೀಪಾವಳಿ ಸಮಯದಲ್ಲಿ ಎಲ್ಲ ಹಣ ಪಾವತಿಸಿ ಚುಕ್ತಾ ಮಾಡುವುದು. ಮನೆಯಲ್ಲಿ ದೊಡ್ಡ ಅಡಿಕೆ ತೋಟವಿದ್ದರೂ ಅದನ್ನು ಆರೈಕೆ ಮಾಡಿ ನೋಡಿಕೊಳ್ಳಲು ಕಷ್ಟವಾಗಿದ್ದರಿಂದ ಅಪ್ಪಯ್ಯ ಹತ್ತಿರದ ಕೊಮೆಯ ವಿಟ್ಟು ಪೂಜಾರಿಗೋ ಅಥವ ಬೇರೆ ಯಾರಿಗಾದರೂ ಸಾಟಿಗೆ ಗುತ್ತಿಗೆಗೆ ಕೊಡುತ್ತಿದ್ದರು.

ಅಪ್ಪಯ್ಯ, ಎತ್ತರದ ಆಜಾನುಬಾಹು ಆಳು. ಬಿಳಿ ಮಣ್ಣದ ತುಂಬು ಮೈಕಟ್ಟು. ಕಚ್ಚೆ ಪಂಚೆ ಹಾಕಿ, ಬಿಳಿ ಜುಬ್ಬ ತೊಟ್ಟು ಬಗಲಲ್ಲಿ ನಿತ್ಯ ಬಳಕೆಯ ವಸ್ತುವಿನ ಕಪ್ಪು ಚೀಲ ಸಿಕ್ಕಿಸಿಕೊಂಡು, ಹೆಗಲ ಮೇಲೊಂದು ಬಿಳಿಶಾಲು ಧರಿಸಿ ರಾಜ ಗಾಂಭೀರ್ಯದಿಂದ ನಡೆದು ಬರುತ್ತಿದ್ದರೆ, ನೋಡಿದವರು ಪುನಹ ತಿರುಗಿ ನೋಡುವಷ್ಟು ಚಂದ, ಸದಾ ನಗುಮುಖ. ಇರಲಿ.  ಮೇಳಕ್ಕೆ ಹೋದ ಅಪ್ಪಯ್ಯ ಮನೆಗೆ ಬರುವುದು ತಿಂಗಳಿಗೋ, ಎರಡು ತಿಂಗಳಿಗೋ. ಹತ್ತಿರದ ಊರಿನಲ್ಲಿ ಎಲ್ಲಾದರೂ ಆಟ ಇದ್ದರೆ ಬೆಳಿಗ್ಗೆ ಬಂದು ಸಂಜೆ ಹೋಗುತ್ತಿದ್ದರು. ಮಧ್ಯಾಹ್ನ ಊಟವಾದ ಮೇಲೆ ಅವರು ಸ್ವಲ್ಪ ಹೊತ್ತು ಮಲಗುತ್ತಾರೆ. ಆಗ ನಾವು ಎಂದಿನಂತೆ ಆಟ ಆಡಿ ಗಲಾಟೆ ಮಾಡುವಂತಿಲ್ಲ. ಮನೆ ಆಗ ಪಿನ್ ಡ್ರಾಪ್ ಸೈಲೆನ್ಸ್ ಆಗಿರುತ್ತದೆ. ಚೂರು ಗಟ್ಟಿಯಾಗಿ ಮಾತಾಡಿದರೂ ಅಮ್ಮನೋ ಅಣ್ಣಯ್ಯನೋ, “ಆಚೆ ಹೋಯ್ನಿಮಕ್ಳೆ, ಅಪ್ಪಯ್ಯ ಮಲಗಿದ್ದು ಕಾಂತಿಲ್ಯಾ” ಅನ್ನುತ್ತಿದ್ದರು. ನಂತರ ಎದ್ದು, ಮೂರು ಮೈಲಿಯಾಚೆ ಇರುವ ಭವಾನಿಯಮ್ಮನ ಮನೆಗೂ ಹೋಗಿ ಒಮ್ಮೆ ಮಾತಾಡಿಸಿ ಬರಬೇಕು. ಸಂಜೆ ಪುನಹ ಆಟಕ್ಕೆ ಹೊರಟರು. ರಾತ್ರಿ ಊಟ ಮೇಳದ ಬಿಡಾರದಲ್ಲಿಯೇ.

ಸುಮಾರು ಮೇ ತಿಂಗಳ ತನಕವೂ ಮೇಳ ಇದ್ದು ನಂತರ ಮಳೆಗಾಲದಲ್ಲಿ ಬೆಂಗಳೂರು ಬೊಂಬಾಯಿಯಲ್ಲಿ ಆಟ ಅಂತಲೋ, ತಾಳಮದ್ದಲೆ ಅಂತಲೋ ತಿರುಗಾಟದಲ್ಲೇ ಇರುತ್ತಿದ್ದರು. ಆದರೆ ಅವರು ಮನೆಗೆ ಬರುವಾಗ ಯಾವಾಗಲೂ ಮಕ್ಕಳಿಗೆ ಅಂತ ಹಣ್ಣು ಹಂಪಲನ್ನೋ, ಸಿಹಿ ತಿಂಡಿಗಳನ್ನೋ ತಂದೇ ತರುತ್ತಿದ್ದರು. ಅದನ್ನು ಅಮ್ಮ, ಸಣ್ಣ ಸಣ್ಣ  ಬಾಳೆಯ ಎಲೆಯ ತುಂಡುಗಳಲ್ಲಿ (ಬಾಳೆ ಸರ) ಹಾಕಿ, ನಮ್ಮನ್ನು ಕರೆದು ಸುತ್ತಲೂ ಕುಳ್ಳಿರಿಸಿ ಸಮನಾಗಿ ಹಂಚುತ್ತಿದ್ದಳು. ಅವರಿಗೆ ಹೆಚ್ಚಾಯಿತು ನನಗೆ ಕಡಿಮೆಯಾಯಿತು ಅಂತ ಗಲಾಟೆ ಇದ್ದದ್ದೇ ಬಿಡಿ. ಕೆಲವೊಮ್ಮೆ ನಮ್ಮದನ್ನು ಬೇಗ ಮುಗಿಸಿ, ಹತ್ತಿರ ಕುಳಿತವರ ಪಾಲನ್ನೂ ಕಬಳಿಸುವುದೂ, ಜಗಳಾಡುವುದೂ, ಕಡೆಗೆ ಅಮ್ಮ ಸಮಾಧಾನ ಮಾಡುವುದೂ ಇದ್ದಿತ್ತು.

 (ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ