ಸೋಮವಾರ, ಸೆಪ್ಟೆಂಬರ್ 25, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 13

ಬ್ರಾಹ್ಮಣರಲ್ಲಿ ಉಪನಯನವಾದ ಮೇಲೆ, ಊಟಕ್ಕೆ ಕುಳಿತಾಗ ಮಾತಾಡಬಾರದು ಎಂಬ ಒಂದು ರಿವಾಜಿದೆ. ಆದರೆ ಹೆಚ್ಚಿನವರು ಶಾಸ್ತ್ರಕ್ಕೆ ನಾಲ್ಕು ದಿನ ಸುಮ್ಮನಿದ್ದು, ಆಮೇಲೆ ಮಾಮೂಲಿಯಾಗಿ ಮಾತ ಕತೆಯಾಡುತ್ತಾರೆ. ಆದರೆ ಈ ನಮ್ಮ ಭಟ್ಟರು  ಊಟ ಮಾಡುವಾಗ ಮಾತನಾಡದೇ ಇರುವ ನಿಯಮವನ್ನು ಪಾಲಿಸುತ್ತಿದ್ದರು. ಊಟಕ್ಕೆ ಕುಳಿತಾಗ “ಬೇಕು, ಬೇಡ” ಎನ್ನುವುದೆಲ್ಲ ಕೈಸನ್ನೆ, ಕಣ್ಣುಸನ್ನೆಯಲ್ಲೆ. ಒಮ್ಮೆ ಅವರ ಹೆಂಡತಿ, ಮಕ್ಕಳ ಜೊತೆಗೆ ನೆಂಟರ ಮನೆಗೆ ಊಟಕ್ಕೆ ಹೋಗಿದ್ದರಂತೆ. “ ತೊಟ್ಟಿಲಲ್ಲಿರುವ ಮಗು ನಿದ್ರೆ ಮಾಡಿದೆ. ಅದು ಏಳುವುದರ ಒಳಗೆ ಬಂದರೂ ಬಂದೇನು” ಎಂದು ಗಂಡನನ್ನು ಒಪ್ಪಿಸಿ “ಸ್ವಲ್ಪ ನೋಡುತ್ತಾ ಇರಿ” ಎಂದು ನೆನಪಿಸಿ ಹೋಗಿದ್ದರು. ಅದು ಅವರ ಮೂರನೆಯದೋ ನಾಲ್ಕನೆಯದೋ, ಸಣ್ಣ ಮಗು, ಹೊರಗೆ ಚಾವಡಿಯಲ್ಲಿ ತೊಟ್ಟಿಲಲ್ಲಿ ನಿದ್ದೆ ಮಾಡುತ್ತಿತ್ತು.
ಮಧ್ಯಾಹ್ನ ಊಟದ ಸಮಯ. ಭಟ್ಟರು ಊಟಕ್ಕೆ ಕುಳಿತು ಎಲೆಗೆ ಅನ್ನ ಹಾಕಿಕೊಂಡು, ಜಲಪ್ರೋಕ್ಷಣೆ ಮಾಡಿಕೊಂಡು ಪರಿಸಿಂಚನವಾಗಿ, ಓಂ ಅಮೃತೋ ಪತ್ತರಣಮಸಿ ಮುಗಿಸಿ, ಇನ್ನೇನು ಸಾರು ಬಡಿಸಿಕೊಂಡು ಊಟ ಪ್ರಾರಂಭಿಸಿದ್ದರಷ್ಟೆ. ಆಗಲೇ ತೊಟ್ಟಿಲಲ್ಲಿ ಮಲಗಿದ್ದ ಮಗು ಒಮ್ಮೆಲೇ ಎದ್ದು ಕೂಗತೊಡಗಿತು. ಏನು ಮಾಡುವುದು? ಭಟ್ಟರು ಒಬ್ಬರೆ ಮನೆಯಲ್ಲಿ. ಊಟದ ಮಧ್ಯೆ ಎದ್ದರೆ, ಪುನಹ ರಾತ್ರಿಯವರೆಗೆ ಊಟ ಮಾಡುವ ಹಾಗಿಲ್ಲ. ಮಧ್ಯಾಹ್ನದ ಊಟ ಅಲ್ಲಿಗೇ ಮುಗಿಯಿತು. ಹಾಗಂತ ಊಟ ಮಾಡುವಾಗ ಮಾತನಾಡಿ, ಮಗುವಿಗೆ “ತಾನು ಇಲ್ಲಿ ಅಡುಗೆಯ ಮನೆಯಲ್ಲಿ ಇದ್ದೇನೆ” ಎನ್ನುವ ಹಾಗೂ ಇಲ್ಲ. ಏನು ಮಾಡುವುದು? ಅತ್ತ ಧರೆ, ಇತ್ತಪುಲಿ. ಎದ್ದರೆ ಮತ್ತೆ ಮಧ್ಯಾಹ್ನ ಊಟ ಇಲ್ಲ, ಮಾತನಾಡಿದರೆ ಇಷ್ಟರವರೆಗೆ ಬದುಕಿನಲ್ಲಿ ಅಳವಡಿಸಿಕೊಂಡು ಬಂದ ವೃತಭಂಗ. ಭಟ್ರಿಗೆ ಭಾರೀ ಸಂದಿಗ್ಧ. ಮನೆಯಲ್ಲಿ ಯಾರೂ ಇಲ್ಲವೆಂದು ಮಗು ಗಾಬರಿಯಿಂದ ಬಿಕ್ಕಿಬಿಕ್ಕಿ ಮತ್ತೂ ಗಟ್ಟಿಯಾಗಿ ಅಳುತ್ತಿದೆ. ಸ್ವಲ್ಪ ಹೊತ್ತು ಹೋದರೆ ತೊಟ್ಟಿಲಿನಿಂದ ಕೆಳಗೆ ಬಿದ್ದರೂ ಬಿದ್ದೀತು. ಧರ್ಮ ಸಂಕಟ. ಅಂತೂ ಕೊನೆಗೆ ಮಗುವಿನ ಮೇಲಿನ ಮಮತೆಯೇ ಗೆದ್ದಿತು.  “ಮಗೂ.  ಮರ್ಕ್ ಬೇಡ್ವಾ, ನಾನು ಇಲ್ಲೇ ಇದ್ನಲೆ. ಬಾ” ಎಂದು ಗಟ್ಟಿಯಾಗಿ ಹೇಳಿ, ವೃತಭಂಗ ಮಾಡಿಕೊಂಡರಂತೆ. ಮಗು ಅಳು ನಿಲ್ಲಿಸಿ ಸುಮ್ಮನಾಯಿತು. ಅದನ್ನು ಅವರು ಪ್ರತೀಸಲ ವಿಶೇಷ ಊಟದ ಸಮಯದಲ್ಲಿ, “ಈ ಮಗುವಿನಿಂದ ನನ್ನ ವೃತವೊಂದು ಭಂಗವಾಯಿತು ಮರ್ರೆ” ಎಂದು ಆ ಕತೆಯನ್ನು ಗಹಗಹಿಸಿ ನಗುತ್ತಾ ಅವರ ಗಟ್ಟಿಯಾದ ಸ್ವರದಲ್ಲಿ ಹೇಳಿ ಬಣ್ಣಿಸುತ್ತಿದ್ದರು. ನಂತರ ಅವರು ಪುರೋಹಿತಿಕೆಯಿಂದ ಅಲ್ಪಸ್ವಲ್ಪ ಕೈಯಲ್ಲಿ ದುಡ್ಡು ಮಾಡಿಕೊಂಡು ಹುಣಿಸೇಮಕ್ಕಿಯ ಹತ್ತಿರ ಆಸ್ತಿಯನ್ನು ಖರೀದಿಸಿ, ಒಂದು ಮನೆಯನ್ನು ಕಟ್ಟಿಸಿಕೊಂಡು ಅಲ್ಲಿಗೇ ಹೋದರು.
ನಾನು ತುಂಬಾ ಚಿಕ್ಕವನಿರುವಾಗ ನಡೆದ ಘಟನೆಯಿರಬಹುದು. ಇದೂ ಮನಸ್ಸಿನಲ್ಲಿ ಹಾಗೆಯೇ ಉಳಿದುಕೊಂಡು ಬಿಟ್ಟಿದೆ. ಚೇರಿಕೆಯಲ್ಲಿ, ಬೆಳಿಗ್ಗೆ ಅಮ್ಮ ಹಟ್ಟಿಗೆ ಹೋಗಿ ಎಮ್ಮೆಯ ಹಾಲು ಕರೆದು, ಒಂದು ಉಗ್ಗದಲ್ಲಿ ಹಾಕಿ ರಮೇಶಣ್ಣಯ್ಯನಿಗೆ ಕೊಡುತ್ತಿದ್ದಳು, ಅವನು ಪ್ರತೀದಿನ ಅದನ್ನು ಕಲ್ಲಟ್ಟೆಯ ಅತ್ತೆಯ ಮನೆಗೆ ಕೊಟ್ಟು, ಹಾಗೆಯೇ ಶಂಕರನಾರಾಯಣದ ಹೈಸ್ಕೂಲಿಗೆ ಹೋಗುತ್ತಿದ್ದನಂತೆ. ಅತ್ತೆಯ ಮನೆಯಲ್ಲಿ ಆಗ ಕರಾವು ಇರಲಿಲ್ಲವೋ ಅಥವ ನಮ್ಮ ಮನೆಯಲ್ಲಿ ಹಾಲು ಹೆಚ್ಚಿಗೆ ಇರುತ್ತಿತ್ತೋ ಗೊತ್ತಿಲ್ಲ. ನಮ್ಮ ಮನೆಯ ಹಿಂದಿನ ಮಕ್ಕಿಗದ್ದೆಯನ್ನು ದಾಟಿ, ನಮ್ಮ ಜಾಗದ ಅಂಚಿನಲ್ಲಿರುವ ಸರಕಾರಿ ಹಾಡಿಯನ್ನು ಹೊಕ್ಕು, ಆಚೆ ಬದಿಯಿಂದ ಇಳಿದರೆ ಚೋರಾಡಿ ಬಯಲು ಸಿಗುತ್ತದೆ. ಅಲ್ಲಿಂದ ಚೋರಾಡಿ ಕಂಬಳಗದ್ದೆಯ ಅಂಚಿನಲ್ಲಿ ನಡೆದು, ಹಾಗೆಯೇ ಹೊಳೆಯ ಬದಿಯಲ್ಲಿಯೇ ಮುಂದೆ ಹೋಗಿ, ಮತ್ತೆ ಬೈಲುಮನೆ ಪುಟ್ಟನ ಮನೆಯ ಪಕ್ಕದ ಅವರ ಹಟ್ಟಿಯ ಹೊರಬದಿಯಿಂದ ಮೇಲೆ ಹತ್ತಿದರೆ, ಆ ದಾರಿ ಸೀದಾ ಕಲ್ಲಟ್ಟೆಯ ಅತ್ತೆಯ ಮನೆಯನ್ನು ಸೇರುತ್ತದೆ. ಅಂದಾಜು ಮೂರುಮೈಲಿ ದೂರ ಇರಬಹುದು. ಹಾಲಾಡಿ ಪೇಟೆಗೆ ಬರಬೇಕಾದರೆ ಮತ್ತೆ ಉತ್ತರಕ್ಕೆ ಅಂದಾಜು ಅಷ್ಟೇ ದೂರ ನಡೆಯಬೇಕು. ಅಲ್ಲಿಂದ ಐದು ಮೈಲಿ ಶಂಕರನಾರಾಯಣದ ಹೈಸ್ಕೂಲಿಗೆ. ನಡೆದೇ ಹೋಗುವುದು. ಬೆಳಿಗ್ಗೆ ಮನೆಯಿಂದ ಹೊರಡುವುದೇ ತಡವಾದರೆ ಬೇಗ ಬೇಗ ಹೋಗಬೇಕು. ಇಲ್ಲದಿದ್ದರೆ ಕ್ಲಾಸಿಗೆ ತಡವಾಗುತ್ತದೆ.
ಚೋರಾಡಿ ಬೈಲಿಗೆ ಇಳಿಯುವ ಸ್ಥಳದಲ್ಲಿ ಒಂದೆರಡು ಕುಂಬಾರರ ಮನೆಯೂ ಸಿಗುತ್ತದೆ. ಅವುಗಳ ಪಕ್ಕದ ದಾರಿಯಲ್ಲೇ ನಡೆದು ಮುಂದೆ ಹೋಗಬೇಕು. ಅದನ್ನು ಹಾದು ಹೋಗುವಾಗ ಆ ಮನೆಯ ಹೆಂಗಸರು ಅಣ್ಣಯ್ಯನ ಗುರುತು ಹಿಡಿದು. “ಅಯ್ಯಾ. ಅತ್ತೆ ಮನಿಗೆ ಹೊರಟ್ರ್ಯಾ?” ಎಂದು ರಾಗವಾಗಿ ಮಾತಾಡಿಸುವರು. ಇವನು ಮೊದಲೇ ನಾಲ್ಕು ಮಾತಾಡಿದರೆ ಒಂದು ಆಡುವವನು. ತಡವಾಗಿದೆ ಬೇರೆ. ಅವರ ಪ್ರಶ್ನೆಗೆ “ಹೂ ಹಾ” ಎನ್ನುವುದರ ಒಳಗೆ ಅವನು ಮಾರು ದೂರ ಮುಂದೆ ಹೋಗಿಯಾಯಿತು. ಆದರೂ ಆ ಹೆಂಗಸರು ಬಿಡದೆ “ಅದೆಂತಾ ಅಯ್ಯ, ಕೈಯಂಗ್ ಹಿಡ್ಕಂಡದ್?”. ಅಂದರೆ ಅಣ್ಣಯ್ಯನಿಗೆ ಇವರಿಗ್ಯಾಕೆ ಸುಮ್ಮನೇ ಬೇಡದ ತನಿಖೆ? ಅಂತ ಸಿಟ್ಟು. ಆದರೆ ಅವರು ಬಿಡಬೇಕಲ್ಲಾ. ಇವನಿಗೆ ಕೇಳಲಿಲ್ಲ ಎಂದು ಪುನಹ “ಅಯ್ಯಾ ಅದೆಂತದೆ?” ಅಂದರು. ಇವನು “ಕಾಂತಿಲ್ಯಾ? ಪಾತ್ರ” ಎಂದು ಮುಂದೆ ಹೋಗುತ್ತಿದ್ದನಂತೆ. ಹಾಲು ಅನ್ನುವುದಿಲ್ಲ ಪುಣ್ಯತ್ಮ. ಅವರು ಈ “ಅಯ್ಯನಿಗೊಂದ್ ಸಿಟ್ಟಪ” ಎಂದು ತಮ್ಮ ಕೆಲಸಕ್ಕೆ ಹೋಗುತ್ತಿದ್ದರು. ಹಾಗಂತ ಅಷ್ಟು ಹೇಳಿಸಿಕೊಂಡರೂ ಮರುದಿನ ಮತ್ತೆ ಈ ಅಯ್ಯನನ್ನು ಕಂಡ ಕೂಡಲೇ ಅವರಿಗೆ ಮಾತಾಡಿಸಲೇಬೇಕು.
ಬಿದ್ಕಲ್ಕಟ್ಟೆಯಲ್ಲಿ ಆಗ ಜನಾರ್ದನ ಎಂಬ ಆಯುರ್ವೇದ ಪಂಡಿತರಿದ್ದರು. ಅವರ ಕೈಗುಣ ಬಹಳ ಒಳ್ಳೆಯದಿತ್ತು. ನಮ್ಮ ಕಲ್ಲಟ್ಟೆ ಅತ್ತೆಗೆ ಹುಷಾರಿಲ್ಲದಿದ್ದಾಗ ಅವರದೇ ಔಷಧಿ ಆಗಬೇಕು. ಬೇರೆ ಡಾಕ್ಟರರ ಔಷಧ ತಂದರೆ, ಅದು ಅವರಿಗೆ ತಾಗುತ್ತಿರಲಿಲ್ಲ. ಅಂದರೆ ಗುಣವಾಗುತ್ತಿರಲಿಲ್ಲ. ಅವರು ಬಿದ್ಕಲ್ಕಟ್ಟೆಗೆ ಹೋಗಿಯೇ ಮದ್ದು ತರಲು ಮಕ್ಕಳನ್ನು ಓಡಿಸುತ್ತಿದ್ದರು. ಒಮ್ಮೊಮ್ಮೆ ನೆನಪು ಹೋಗಿಯೋ ಉದಾಶೀನವಾಗಿಯೋ ಮದ್ದು ತರದೇ ಇದ್ದಲ್ಲಿ ಅಥವ ಬೇರೆ ಡಾಕ್ಟರ್ ರ ಮದ್ದು ತಂದರೆ ಅವರು ತೆಗೆದುಕೊಳ್ಳುತ್ತಲೇ ಇರಲಿಲ್ಲ. ಮತ್ತು  “ನಿಮಗೆಲ್ಲಾ ನಾನು ಅಂದರೆ ಸಸಾರ” ಎಂದು ಅತ್ತು ಕರೆದು ಆಕಾಶ ಪಾತಾಳ ಒಂದು ಮಾಡುತ್ತಿದ್ದರು.
ಒಮ್ಮೆ ಹಾಗೆ ಅವರಿಗೆ ಜ್ವರ ಬಂದಾಗ, ರಮೇಶಣ್ಣಯ್ಯ ಹಾಲಾಡಿಯ ಡಾಕ್ಕರ್ ಒಬ್ಬರ ಮದ್ದು ತಂದು ಕೊಟ್ಟು “ಇದು ಜನಾರ್ದನ ಪಂಡಿತರದ್ದು “ ಅಂದ. ಅದನ್ನು ಅತ್ತೆ ಅದನ್ನು ಕುಡಿದರು. ಅವರ ಜ್ವರ ಗುಣವಾಯಿತು. ಆಮೇಲೆ ಅತ್ತೆಗೆ “ಅದು ಹಾಲಾಡಿ ಸರಕಾರಿ ಆಸ್ಪತ್ರೆಯ ಮದ್ದು” ಎಂದು ನಿಜ ಸಂಗತಿ ಹೇಳಿ ಕಣ್ಣುಮಿಟುಕಿಸಿದ. ಅವರು “ನೀನ್ ಹೀಂಗ್ ಮಾಡುದಾ? ಮಾಣಿ” ಎಂದು ಬಾಯ್ತುಂಬಾ ನಕ್ಕರಂತೆ.
(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ