ಗುರುವಾರ, ಸೆಪ್ಟೆಂಬರ್ 14, 2017

 ನನ್ನೊಳಗೆ
ಭಾಗ 2
ನಮ್ಮ ಅಜ್ಜಯ್ಯ ಶ್ರೀನಿವಾಸ ಉಪ್ಪೂರರ ತಂದೆ, ವಾಸುದೇವ ಉಪ್ಪೂರರು ಹಾಲಾಡಿ ತಟ್ಟುವಟ್ಟಿನ ಹತ್ತಿರದ ಕುದುರು ಮನೆ ಎಂಬಲ್ಲಿ ಬಂದು ನೆಲೆಸಿದರು. ಅವರು ಪ್ರಸಿದ್ಧ ನಾಟೀ ವೈದ್ಯರಾಗಿದ್ದರಂತೆ. ಅವರ ಮಗ ಶ್ರೀನಿವಾಸನಿಗೆ ಅಂದರೆ ನನ್ನ ಅಜ್ಜಯ್ಯನಿಗೆ ಯಕ್ಷಗಾನ ಬಯಲಾಟದ ಮರುಳು. ಅದರಲ್ಲೇ ಪ್ರಾವೀಣ್ಯತೆ ಪಡೆದು ಭಾಗವತಿಕೆಯನ್ನು ಕಲಿತು ಮೇಳಕ್ಕೆ ಸೇರಿದರು. ಮೇಳಕ್ಕೆ ಹೋಗಿ ಪ್ರಸಿದ್ಧಿ, ಪ್ರಭುತ್ವ ಪಡೆದರೂ ಹಣ ಮಾಡುವುದು ಅವರಿಂದಾಗಲಿಲ್ಲ. ಅವರ ಔದಾರ್ಯತನ ದುಂದುವೆಚ್ಚಗಳಿಂದ ಇದ್ದ ಆಸ್ತಿಯನ್ನೂ ಉಳಿಸಿಕೊಳ್ಳುವುದೂ ಕಷ್ಟವಾಯಿತು. ಬೇಸಿಗೆಯಲ್ಲಿ ಮೇಳದ ದುಡಿತದಿಂದ ಸಂಪಾದನೆ ಇದ್ದರೂ, ಮಳೆಗಾಲದಲ್ಲಿ ಊಟಕ್ಕೆ ಸಾಲ ಮಾಡಬೇಕಾದ ಪರಿಸ್ಥಿತಿ. ಬೆಳೆಯುತ್ತಿದ್ದ ಬೆಳೆ ಸಾಲದಾಯಿತು.

ಮನುಷ್ಯನಿಗೆ ಸಿಟ್ಟು ಹಠ ಬಹಳ ಇದ್ದರೆ ವಿವೇಕ ಕಡಿಮೆ ಎನ್ನುತ್ತಾರೆ. ಅಜ್ಜಯ್ಯನಿಗೆ ತಾನು ಹೇಳಿದ್ದೇ ಆಗಬೇಕು ಅಂತ ಹಠ, ಸಿಟ್ಟು. ಬಯಲಾಟ ಆಗುವಾಗ ಕಲಾವಿದರಿಗೆ ತಪ್ಪಾದರೆ ರಂಗಸ್ಥಳದಲ್ಲೇ ನಾಲ್ಕು ಬಾರಿಸುತ್ತಿದ್ದೂ ಉಂಟಂತೆ. ಆಗ ನಿಂತುಕೊಂಡೇ ಭಾಗವತಿಕೆ ಮಾಡುತ್ತಿದ್ದುದರಿಂದ ಕಲಾವಿದರು ತಪ್ಪಿದರೆ ಸೀದಾ ಮುಂದೆ ಬಂದು ”ಹಗಲಿಗೆ ಚರಿಗೆಕೂಳು ಸಮಾ ತಕಂಬ್ ಕಾತ್ತಾ’ ಅಂತ ಬೈದು ಚೌಕಿಗೆ ಅಟ್ಟುತ್ತಿದ್ದರಂತೆ. ಅಂತ ಸಿಟ್ಟು. ದಪ್ಪ ಸ್ವರ, ಜೋರು ದ್ವನಿ. ಆಗಿನ ಅಷ್ಟೇನೂ ವಿದ್ಯಾವಂತರಲ್ಲದ ಕಲಾವಿದರೂ, ಇವರು ಎಂದರೆ ಹೆದರಿ ಸಾಯುತ್ತಿದ್ದರು. ಜೊತೆಗೆ ಅಷ್ಟೇ ಗೌರವ. ಅವರು ಇದ್ದರೆ ಆಟ ಚೆನ್ನಾಗಿ ಆಗುತ್ತದೆ ಅಂತ. ಅವರ ಸಿಟ್ಟಿಗೆ ಇನ್ನೊಂದು ಉದಾಹರಣೆಕೊಡುವುದಾದರೆ, ಒಮ್ಮೆ ಮನೆಯಲ್ಲಿ ಊಟಕ್ಕೆ ಕುಳಿತಾಗ ಬಡಿಸಿದ ಸಾರು ಚೆನ್ನಾಗಿಲ್ಲವೆಂದು ಸಾರಿನ ಪಾತ್ರೆಯನ್ನೆ ತಟ್ಟಿ ಅಜ್ಜಿಯ ಮುಖಕ್ಕೆ ಹಾರಿಸಿ ಎದ್ದು ಹೋಗಿದ್ದರಂತೆ. ಒಮ್ಮೊಮ್ಮೆ ಸಿಟ್ಟು ಬಂದು ಮನೆಬಿಟ್ಟು ಹೋಗಿ ಅದೆಷ್ಟೋ ದಿನಗಳ ಬಳಿಕ ಬಂದದ್ದು ಎಷ್ಟೋ ಬಾರಿಯಂತೆ. ಮನೆಗೆ ಅವರು ಸ್ನೇಹಿತರನ್ನು, ಕಲಾವಿದರನ್ನು ಕರೆದು ತರುವವರು ಮನೆಯಲ್ಲಿ ಉಣ್ಣಲಿಕ್ಕೆ ಇದೆಯಾ ಇಲ್ಲವಾ ಎಂದೂ ನೋಡುತ್ತಿರಲಿಲ್ಲ. ಅವರ ಇಂತಹ ಜೀವನ ಶೈಲಿಯಿಂದ ಸಾಲ ಸೋಲ ಆಯಿತು. ತೀರಿಸುವ ಯೋಚನೆ ಮಾಡಲಿಲ್ಲ. ಹೇಗೋ ಆಗುತ್ತದೆ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೋ ಎಂಬ ಧೋರಣೆ ಹೆಚ್ಚು ಕಾಲ ನಡೆಯಲಿಲ್ಲ. ಅಂತು ಮಾಡಿದ ಸಾಲ ತೀರಿಸಲಾರದೇ ಇದ್ದ ಆಸ್ತಿಯನ್ನೇ ಅಡ ಇಟ್ಟು ಕೊನೆಗೆ ಅದನ್ನೂ ತೀರಿಸಲಾರದೇ ಮಾರಬೇಕಾಗಿ ಬಂದು, ಎಲ್ಲವನ್ನು ಕಳೆದುಕೊಂಡು ನಿರ್ಗತಿಕರಾಗಿ ಊರು ಬಿಟ್ಟು ಹೊರಡುವ ಕಾಲ ಬಂತು.
 ಅಜ್ಜಯ್ಯನಿಗೆ ಭವಾನಿ, ವಾಸುದೇವ ಮತ್ತು ನನ್ನ ಅಪ್ಪಯ್ಯ ನಾರ್ಣಪ್ಪ ಎಂದು ಮೂರು ಜನ ಮಕ್ಕಳು. ಅಪ್ಪಯ್ಯನಿಗೆ ಮದುವೆ ಆಗಿದ್ದಿತಷ್ಟೆ. ಮೇಳಕ್ಕೆ ಹೋಗಿ ಒಂದೆರಡು ವರ್ಷ ಆಗಿದ್ದಿರಬಹುದು. ಅಜ್ಜಯ್ಯನಿಗೆ ಹೇಳುವಷ್ಟು ಧೈರ್ಯ ಇಲ್ಲ. ಅಂತಹ ಸಮಯದಲ್ಲಿ ಅಜ್ಜಯ್ಯ, ಚೇರಿಕೆಯಲ್ಲಿ ಮಾರುವ ಆಸ್ತಿ ಇದೆ ಎಂದು ಗೊತ್ತಾಗಿ ಬಂದು ಮಾತಾಡಿ, ತಮ್ಮಯ್ಯ ಭಟ್ಟರಿಂದ ಅವರ ಮನೆಯ ಹಿಂದುಗಡೆಯ ನಾಲ್ಕೈದು ಎಕರೆ ಆಸ್ತಿಯನ್ನು ಭೋಗ್ಯಕ್ಕೆ ತೆಗೆದುಕೊಂಡರು. ತತ್ಕಾಲಕ್ಕೆ ಅವರನ್ನೇ ಬೇಡಿ, ಅನುಮತಿಯನ್ನು ಪಡೆದು ಅವರ ಮನೆಯ ಒಂದು ಬದಿಯ ಓರಿಯಲ್ಲಿಯೇ ವಾಸಿಸತೊಡಗಿದ್ದಾಯಿತು. ಆಗ ಸರಕಾರದ ಕಾನೂನು ಬದಲಾಗಿ ಭೋಗ್ಯಕ್ಕೆ ಪಡೆದ ಆಸ್ತಿಯನ್ನು ಸ್ವಂತಕ್ಕೆ ಮಾಡಿಕೊಳ್ಳದಿದ್ದರೆ ಕೈ ತಪ್ಪಿ ಹೋಗುವ ಕಾಲ ಬಂದಾಗ ಪುನಹ ಅಲ್ಲಿ ಇಲ್ಲಿ ಸ್ನೇಹಿತರಿಂದ ಸಾಲ ಪಡೆದು ಅದೇ ಆಸ್ತಿಯನ್ನು ಕ್ರಯಕ್ಕೆ ತೆಗೆದುಕೊಳ್ಳಬೇಕಾಯಿತು. ಅಪ್ಪಯ್ಯನಿಗೆ ಹಿರಿಯ ಹೆಣ್ಣು ಮಗು ಜಯಲಕ್ಷ್ಮಿ ತಮ್ಮಯ್ಯ ಭಟ್ಟರ ಮನೆಯ ಓರಿಯಲ್ಲಿಯೇ ಹುಟ್ಟಿದಳು. ನಂತರ ಪಕ್ಕದಲ್ಲೇ ಆಸುಪಾಸಿನವರನ್ನು ಕೇಳಿ ಮರ ಮಟ್ಟುಗಳನ್ನು ಪಡೆದು ಊರ ಪಟೇಲರನ್ನು ಬೇಡಿ ಅವರ ಮತ್ತು ಸ್ನೇಹಿತರ ಸಹಾಯದಿಂದ ಒಂದು ಹುಲ್ಲಿನ ಮನೆಯನ್ನು ಕಟ್ಟಿಕೊಂಡು ವಾಸಿಸತೊಡಗಿದ್ದಾಯಿತು. ನಂತರ ಅಪ್ಪಯ್ಯನಿಗೆ ಸಾಲಾಗಿ ಏಳು ಜನ ಗಂಡು ಮಕ್ಕಳು. ಎಂಟನೆಯ ಹಾಗೂ ಕೊನೆಯವನು ನಾನು. ಆದರೆ ನಾನು ಹುಟ್ಟುವಾಗ ಮನೆಯ ಆರ್ಥಿಕ ಪರಿಸ್ಥಿತಿ ತುಂಬಾ ಸುಧಾರಿಸಿತ್ತು ಅನ್ನಿ.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ