ಮಂಗಳವಾರ, ಸೆಪ್ಟೆಂಬರ್ 26, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 14

 ನಾನು ಹಾಲಾಡಿ ಶಾಲೆಗೆ ಸೇರಿದಾಗ, ಹಾಲಾಡಿ ನಾರಾಯಣ ಪೈಗಳು ಹೆಡ್ ಮಾಸ್ತರರು, ಮತ್ತು ರಾಜೀವ ಶೆಟ್ರು, ಶೇಷಪ್ಪ ಶೆಟ್ರು ರಾಜೂ ಭಂಡಾರ್ರು ದಾಕ್ಷಾಯಿಣಿಮೇಡಂ, ರಾಜೀವಿಮೇಡಂ, ಮುಂತಾದವರು ಅಲ್ಲಿ ಮೇಷ್ಟ್ರಾಗಿದ್ದರು. ನನ್ನ ಜೊತೆಗಾರರ ಪೈಕಿ ನೆನಪಿಗೆ ಬರುವವರೆಂದರೆ ಮಣಿಗೇರಿ ಚಂದ್ರಶೇಖರ ಶೆಟ್ಟಿ,  ಗಣಪತಿ ಮಿತ್ಯಾಂತ, ಕುದ್ರು ಮನೆ ರಘುರಾಮ ಶೆಟ್ಟಿ, ಶೇರ್ಡಿ ಸುರೇಶ ಶೆಟ್ಟಿ, ಹಾಲಾಡಿ ಮೇಲ್ಪೇಟೆ ಅಬ್ಬಾಸ್ ಸಾಹೇಬ್, ಮೂಡ್ಲಮಕ್ಕಿ ಶ್ರೀಕಾಂತ ಮಿತ್ಯಾಂತ, ಹಾಲಾಡಿ ವೆಂಕಟು, ನಿತ್ಯಾನಂದ ಶೆಣೈ, ಕೃಷ್ಣಾನಂದ ಶೆಣೈ, ಹಾಲಾಡಿ ಬಾಲಕೃಷ್ಣ ಶೆಟ್ಟಿ, ರಾಜು ಕುಲಾಲ, ಗಣಪು ದೇವಾಡಿಗ, ಗಾಯತ್ರಿ ಅಡಿಗ, ಚೋರಾಡಿ ವೀಣಾ ಹಂಜಾರ್ ಹೀಗೆ ಕೆಲವರು.
ಆಗ ಐದನೇ ಕ್ಲಾಸಿನಿಂದ ಇಂಗ್ಲೀಷ್ ಕಲಿಯಬೇಕಾಗಿತ್ತು. ನಾರಾಯಣ ಪೈಗಳು ಇಂಗ್ಲೀಷಿಗೆ. ನನಗೆ ಇಂಗ್ಲೀಷ್ ಬಹಳ ಕಷ್ಟವೆ. ಏನು ಮಾಡಿದರೂ ತಲೆಗೆ ಹೋಗದು. ಶೇಷ ಮಾಸ್ಟ್ರು ಲೆಕ್ಕಕ್ಕೆ. ಅದೂ ಕಷ್ಟವೆ. ಈ ಶಾಲೆ ಅಂತ ಯಾಕೆ ಮಾಡಿದರೋ ಅನ್ನಿಸುತ್ತಿತ್ತು. ಅಶ್ವತ್ಥದ ಎಲೆಯನ್ನು ಕಿವಿಗೆ ಸಿಕ್ಕಿಸಿಕೊಂಡು ಹೋದರೆ ಮಾಷ್ಟ್ರು ಹೊಡೆಯುವುದಿಲ್ಲ ಅಂತ ಯಾರೋ ಹೇಳಿದರು ಅಂತ, ದಿನವೂ ಕಿವಿಗೆ ಒಂದುಎಲೆಯನ್ನು ಸಿಕ್ಕಿಸಿಕೊಂಡು ಹೋಗುತ್ತಿದ್ದೆ. ಆದರೂ ಪೆಟ್ಟು ತಪ್ಪುತ್ತಿರಲಿಲ್ಲ. ಬೆಳಿಗ್ಗೆ ಬೇಗನೇ ಶಾಲೆಯ ಹತ್ತಿರವೇ ಇರುವ ಮಾರಿಕಾನು ಅಮ್ಮನ ದೇವಸ್ಥಾನಕ್ಕೆ ಹೋಗಿ “ಇವತ್ತು ಮಾಸ್ಟ್ರು ಹೊಡೆಯದೇ ಇರಲಪ್ಪ” ಎಂದು ಕೈಮುಗಿದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ. ಅಷ್ಟಾದರೂ ಮನೆಯಲ್ಲಿ ಮಾತ್ರಾ ಪುಸ್ತಕ ತೆಗೆದು ನೋಡುತ್ತಿರಲಿಲ್ಲ. ಮನೆಲೆಕ್ಕ ಮಾಡುವುದಂತೂ ಮರೆತೇಹೋಗುತ್ತಿತ್ತು. ಏನೇನೋ ಆಟಗಳು, ಹೊರಗಡೆ ಸುತ್ತಾಡುವುದು. ಚಿತ್ರ ಬಿಡಿಸುವದು, ಪದ್ಯ ಬರೆಯುವುದು, ಪೇಪರ್ ಕತ್ತರಿಸಿ ಅದರಿಂದ ಏನೇನೋ ಮಾಡುವುದು, ಹೀಗೆ. ಅದೇ ನನ್ನ ಲೋಕವಾಗಿತ್ತು. ಆದ್ದರಿಂದ ನಾನು ಓದಿನಲ್ಲಿ ಮುಂದೆ ಅಂತ ಆದದ್ದೇ ಇಲ್ಲ. ಅಜ್ಜಿಯ ಪುಣ್ಯಕ್ಕೆ ಎಲ್ಲಾದರೂ ನೂರಕ್ಕೆ ನೂರು ಸಿಕ್ಕಿದರೆ ನನ್ನ ಗತ್ತು ಒಮ್ಮೆ ಹೆಚ್ಚಾಗುತ್ತಿತ್ತೇ ವಿನಹ, ಮುಂದಿನ ಸಲ ಅಷ್ಟೇ ಪಡೆಯಬೇಕು ಎಂದು ಛಲ ಬಂದದ್ದೇ ಇಲ್ಲ. ಆದರೆ ಪರೀಕ್ಷೆಯ ಸಮಯದಲ್ಲಿ ಒದ್ದಾಡಿಕೊಂಡು ಓದಿ, ಯಾವ ವರ್ಷವೂ ಪೈಲಾಗದೇ ಮುಂದೆ ಮುಂದೆ ಹೋಗುತ್ತಿದ್ದೆ.
ಬೆಳಿಗ್ಗೆ ಹೋದರೆ ಸಂಜೆಗೇ ಮನೆಗೆ ಬರುವುದು. ಮಧ್ಯಾಹ್ನ ಊಟಕ್ಕೆ ಮೊದಮೊದಲು ಬುತ್ತಿ ತೆಗೆದುಕೊಂಡು ಹೋಗುತ್ತಿದ್ದರೂ  ಅಮೇಲಾಮೇಲೆ ಅದು ಸೇರುವುದಿಲ್ಲ ಎಂದು ಬೇಡ ಎನ್ನುತ್ತಿದ್ದೆ. ಅದಕ್ಕೆ ಅತ್ತೆ “ಮಾಣಿ, ಉಪವಾಸ ಇಪ್ಕಾಗ. ಏಂತಾರು ತಿನ್ನು” ಎಂದು, ಪ್ರತೀದಿನ ಇಪ್ಪತೈದು ಪೈಸೆ ಕೊಟ್ಟು ಕಳುಹಿಸುತ್ತಿದ್ದರು. ನಾನು ಹಾಲಾಡಿ ಭಾಸ್ಕರ ಮಿತ್ಯಾಂತರ ಹೋಟೇಲಿನಲ್ಲಿ ಅದರಲ್ಲಿ ಇಪ್ಪತ್ತು ಪೈಸೆಗೆ ಎರಡು ಇಡ್ಲಿ ತೆಗೆದುಕೊಳ್ಳುತ್ತಿದ್ದೆ. ಉಳಿದ ಐದು ಪೈಸೆಗೆ ಚೋಕಲೇಟೋ, ಪೆಪ್ಪರಮೆಂಟೋ ಬಾಯಿಯಲ್ಲಿ ಇಟ್ಟುಕೊಂಡು ಚೀಪುವಂತಾದ್ದು ಕೊಂಡು ಕೊಳ್ಳುತ್ತಿದ್ದೆ.
ಕಲ್ಲಟ್ಟೆಯ ಅತ್ತೆಯ ಮನೆಯಲ್ಲಿ, ಪ್ರತೀ ವರ್ಷ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಾಡುತ್ತಿದ್ದರು. ಆಟದ ತಿರುಗಾಟ ಇಲ್ಲದ ಅವಧಿ ಅದು. ಸುಮಾರು ಜುಲೈ ಆಗಸ್ಟ್ ನಲ್ಲಿ ಬರುವುದರಿಂದ  ಅಪ್ಪಯ್ಯನೂ ಇರುತ್ತಿದ್ದರು. ಮಧ್ಯಾಹ್ನ ಪೂಜೆ, ಸಮಾರಾಧನೆಯಾದರೆ ರಾತ್ರಿ ಭಜನೆ ಮುಗಿದು ರಾತ್ರಿ ಊಟದ ನಂತರ ತಾಳಮದ್ದಲೆಯೂ ಇರುತ್ತಿತ್ತು. ಅಪ್ಪಯ್ಯ “ಹೂವ ತರುವರ ಮನೆಗೆ” “ಕೃಷ್ಣಾ ನೀ ಬೇಗನೆ ಬಾರೋ” “ಕೃಷ್ಣ ಮೂರ್ತಿ ಕಣ್ಣಮುಂದೆ ನಿಂತಿದಂತಿದೆ” “ರಘುಪತಿ ರಾಘವ ರಾಜಾರಾಮ್” ಮೊದಲಾದ ಭಜನೆಯನ್ನು ಇಳಿಯ ಸ್ವರದಲ್ಲಿ ಹೇಳುತ್ತಿದ್ದರು. ಅದು ನನಗೆ ತುಂಬಾ ಇಷ್ಟವಾಗುತ್ತಿತ್ತು. ಆಸುಪಾಸಿನ ಊರಿನ ಕೆಲವರೂ ಭಜನೆ ಹೇಳುವವರೂ ಬಂದು ಒಂದೆರಡು ಭಜನೆಯನ್ನು ಹೇಳುತ್ತಿದ್ದರು. ನಂತರ ಊಟ. ಆಮೇಲೆ ಬೆಳಗಿನವರೆಗೆ ತಾಳಮದ್ದಲೆ. ಅದಕ್ಕೆ ಶಂಕರನಾರಾಯಣದ ಆರೂರು ಸರ್ವೋತ್ತಮ ಶೇಟ್ರು, ಕೊರಗಯ್ಯ ಶೆಟ್ರು, ನಾಗಪ್ಪ ಪೋರೆಸ್ಟರ್, ಹಾಲಾಡಿ ಜಯವಂತ ಕಾಮತ್ರೂ, ಕರುಣಾಕರ ಶೆಟ್ರು, ಶಂಕರನಾರಾಯಣ ಶಿವರಾಮ ಶೆಟ್ರು ಮುಂತಾದವರು ಖಾಯಂ ಆಗಿ ಬರುತ್ತಿದ್ದರು. ಚಂದ್ರಶೇಖರ ಕೆದ್ಲಾಯರೂ, ಕೆ.ಜಿ ನಾರಾಯಣ ಮುಂತಾದವರೂ ಕೆಲವೊಮ್ಮೆ ಬಂದದ್ದಿದೆ. ಇನ್ನು, ಐರೋಡಿ ಸದಾನಂದ ಹೆಬ್ಬಾರರೂ, ಕೋಟದ ಕೆ. ಎಲ್. ಐತಾಳರೂ (ಇವರು ಭಜನೆ ಹೇಳುತ್ತಿದ್ದರು), ಹೆಚ್. ಶ್ರೀಧರ ಹಂದೆಯವರೂ, ನಮ್ಮ ಭಾವ ಪಿ.ಶ್ರೀಧರ ಹಂದೆಯವರೂ ಬಂದಿದ್ದಿದೆ.
 ಒಮ್ಮೆ ತೆಕ್ಕಟ್ಟೆ ಆನಂದ ಮಾಸ್ಟ್ರು ಬರುವಾಗ ಗದ್ದೆಯ ಬೆಳೆಯ ರಕ್ಷಣೆಗೆ ಹಾಕಿದ ಬೇಲಿಯನ್ನು ದಾಟಲು ಕಷ್ಟವಾಗಿ, ಅವರ ಹೊಟ್ಟೆ ತೊಡಮೆಗೆ ಸಿಕ್ಕಿ ಅದ್ವಾನವಾಗಿತ್ತಂತೆ. ಕೆಲವರು ರಾತ್ರಿ ಬರುವಾಗ ಗದ್ದೆಯ ಕಂಟದ ಬದಿಗೆ ಕಾಲು ಹಾಕಿ ಗದ್ದೆಗೆ ಬಿದ್ದು, ಎದ್ದು ಅನುಭವ ಮಾಡಿಕೊಂಡದ್ದೂ ಇತ್ತು. ಕಂಟದ ಬದಿಯ ಹುಲ್ಲಿನಲ್ಲಿ ಕೆಸರನ್ನು ಕಾಣದೇ ಮೆಟ್ಟಿ ಜಾರಿ ಬಿದ್ದು ಮೈಕೈಯೆಲ್ಲಾ ಕೆಸರು ಮಾಡಿಕೊಂಡು ಮನೆಗೆ ಬಂದು ತೊಳೆದುಕೊಂಡದ್ದೂ ಇದೆ. ನಮ್ಮ ಕಲ್ಲಟ್ಟೆಯ ಮನೆಯ ತನಕ ವಾಹನ ಬರುವುದಿಲ್ಲ. ಕತ್ತಲೆಯಲ್ಲಿ ಬ್ಯಾಟರಿ ಲೈಟು ಹಿಡಿದುಕೊಂಡು ಅದರ ಮಿಣುಕು ಮಿಣುಕು ಬೆಳಕಿನಲ್ಲಿ ಮೂರುಮೂರುವರೆ ಮೈಲಿ ಹಾಡಿಯಲ್ಲಿ, ಗದ್ದೆಯ ಅಂಚಿನಲ್ಲಿ ಅಂತ ನಡೆದೇ ಬರಬೇಕಿತ್ತು. ಎರಡೆರಡು ಕಡೆ ದಾರಿಯಲ್ಲಿ ಸಿಗುವ ಹೊಳೆಗೆ ಅಡ್ಡಹಾಕಿದ ಸಂಕದಲ್ಲಿ ಸರ್ಕಸ್ ಮಾಡಿ ದಾಟಿ ಬರಬೇಕಾಗಿತ್ತು. ಆದರೂ ತಾಳಮದ್ದಲೆಯ ಚಟ. “ನಮ್ಮ ಉಪ್ಪೂರರ ಮನೆಯ ಕಾರ್ಯಕ್ರಮ ಎಂಬ ಮೋಹ”. ಈಗಲೂ ಕೆಲವರು ಆಗಿನ ಭಜನೆಯನ್ನು, ತಾಳಮದ್ದಲೆಗಳನ್ನು ನೆನಪು ಮಾಡಿಕೊಳ್ಳುವುದಿದೆ.
ಕಲ್ಲಟ್ಟೆಯಲ್ಲಿರುವಾಗ ನಾನೂ ಮತ್ತು ಅತ್ತೆಯೂ ಪ್ರತೀದಿನ ಸಂಜೆ ಭಜನೆಯನ್ನು ಮಾಡುತ್ತಿದ್ದೆವು. ಅತ್ತೆಯ ಸ್ವರ ತುಂಬಾ ಚೆನ್ನಾಗಿತ್ತು. ನಾನು ಭಜನೆಗೆ ಬರುವುದಿಲ್ಲ ಎಂದರೂ ಅವರು ಬಿಡುತ್ತಿರಲಿಲ್ಲ. “ಬಾ ಮಾಣಿ ಕೂತುಕೊ” ಎಂದು ಒತ್ತಾಯಿಸಿ, ಏನಾದರೂ ತಿಂಡಿಯ ಆಸೆ ತೋರಿಸಿಯಾದರೂ ಹತ್ತಿರ ಕೂರಿಸಿಕೊಳ್ಳುತ್ತಿದ್ದರು. ನಾನು ಅವರ ಜೊತೆಯಲ್ಲಿ ರಾಘವೇಂದ್ರ ಸ್ವಾಮಿಗಳ ಭಜನೆಯನ್ನು ಮಾಡುತ್ತಿದ್ದೆ.
ನಾನು ಏಳು ಅಥವ ಎಂಟನೇ ಕ್ಲಾಸಲ್ಲಿ ಇರುವಾಗಿನ ಮಾತು. ಅರ್ಧವಾರ್ಷಿಕ ಪರೀಕ್ಷೆ ಮುಗಿದು ರಜೆ ಸಿಕ್ಕಿದ ನಂತರ ಕೋಟದ ಅಕ್ಕನ ಮನೆಗೆ ಹೋಗಿದ್ದೆ. ಆಗ ಅಕ್ಕನಮನೆ ಕೋಟದ ಅಮೃತೇಶ್ವರೀ ದೇವಸ್ಥಾನದಿಂದ ಒಂದು ಪರ್ಲಾಂಗ್ ಪಶ್ಚಿಮಕ್ಕೆ ಇರುವ ಕದ್ರಿಕಟ್ಟು ಎಂಬಲ್ಲಿ ಇತ್ತು. ಅಪ್ಪಯ್ಯನೂ ಕೋಟದ ಹಿರೇ ಮಾಲಿಂಗೇಶ್ವರ ದೇವಸ್ಥಾನದ ಹೊರಪೌಳಿಯ ಉಪ್ಪರಿಗೆಯ ಮೇಲೆ ಭಾಗವತಿಕೆಯ ಕೇಂದ್ರದಲ್ಲಿ ಭಾಗವತಿಕೆಯನ್ನು ಕಲಿಸಿಕೊಡುತ್ತಿದ್ದರು. ಬೇಳಂಜೆ ತಿಮ್ಮಪ್ಪ ನಾಯ್ಕ ಮದ್ದಲೆ ಕಲಿಸಿಕೊಡುವುದಕ್ಕೆ. ಕಲಿಯಲು ಬಂದವರು ದೇವಸ್ಥಾನದ ಒಂದು ಕೋಣೆಯಲ್ಲೇ ಉಳಿದುಕೊಳ್ಳುತ್ತಿದ್ದರು. ಬೆಳಿಗ್ಗೆ ಒಂಬತ್ತು ಗಂಟೆಗೆ ಅಪ್ಪಯ್ಯ ಅಲ್ಲಿಗೆ ಹೋದರೆ, ಮಧ್ಯಾಹ್ನ ಒಂದು ಗಂಟೆಯವರೆಗೆ ಕಲಿಸಿ ಮಧ್ಯಾಹ್ನಮನೆಗೆ ಬಂದು ಊಟ ಮಾಡಿ ಮತ್ತೆ ಎರಡು ಗಂಟೆಗೆ ಪುನಹ ಹೋಗಿ ಸಂಜೆ ಐದು ಗಂಟೆಯವರೆಗೆ ಭಾಗವತಿಕೆ ಕಲಿಸಿ ಮರಳುತ್ತಿದ್ದರು. ಬೆಳಿಗ್ಗೆ ಮತ್ತು ಮಧ್ಯಾಹ್ನ ನಾನೂ ಅಪ್ಪಯ್ಯನ ಜೊತೆಗೆ ಅವರು ಹೇಳಿಕೊಡುವ ಕ್ಲಾಸಿಗೆ ಹೋಗುತ್ತಿದ್ದೆ. ಐರೋಡಿ ಸದಾನಂದ ಹೆಬ್ಬಾರರ ಮುತುವರ್ಜಿಯಿಂದ ಪ್ರಾರಂಭಗೊಂಡ ಅವರ ಕನಸಿನ ಗುರುಕುಲವಾಗಿತ್ತು ಅದು. ಸುಮಾರು ಮುವ್ವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಲ್ಲಿ ಭಾಗವತಿಕೆ, ಚಂಡೆ, ಮದ್ದಲೆ ಕಲಿಯುತ್ತಿದ್ದರು. ಅಪ್ಪಯ್ಯನನ್ನು ಮಾತಾಡಿಸಿಕೊಂಡು ಹೋಗಲೂ ಹಲವಾರು ಜನ ಅವರ ಅಭಿಮಾನಿಗಳು ಬರುತ್ತಿದ್ದರು. ಅವರಿಗೋಸ್ಕರ ಅಪ್ಪಯ್ಯ ಪದ್ಯಗಳನ್ನು ಹಾಡುತ್ತಿದ್ದರು. ಕೆಲವರು ಅಲ್ಲಿಗೆ ಬಂದು ರೆಕಾರ್ಡ್ ಕೂಡಾ ಮಾಡಿಕೊಳ್ಳುತ್ತಿದ್ದರು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ