ಬುಧವಾರ, ಸೆಪ್ಟೆಂಬರ್ 20, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ  7

ನಾಗಪ್ಪ ಮಯ್ಯರು ಅಂದರೆ ನಮ್ಮ ಭಾಗವತ ರಾಘವೇಂದ್ರ ಮಯ್ಯರ ತಂದೆಯವರುಪರಸ್ಥಳದಲ್ಲಿ ಇದ್ದುದರಿಂದ ಒಬ್ಬ ಒಕ್ಕಲು ಆ ಮನೆಯಲ್ಲಿ ಇದ್ದು ಅವರ ಬೇಸಾಯವನ್ನು ನೋಡಿಕೊಳ್ಳುತ್ತಿದ್ದರು. ಅವರು ಅಲ್ಲಿಗೆ ಬಂದುದರಿಂದ ಒಕ್ಕಲನ್ನು ಬಿಡಿಸಿ ಅವರೇ ವಾಸಿಸತೊಡಗಿದ್ದರಿಂದ ಕೆಳಗೆ ಜಾಗ ಸಾಲದಾಗಿ, ನಾವೂ ಆ ಮನೆಯ ಉಪ್ಪರಿಗೆಯನ್ನು ಸೇರಬೇಕಾಯಿತು. ಆದರೆ ನಾನು ಆ ಶಾಲೆಗೆ ಸೇರಿದ ವರ್ಷವೋ ಅಥವ ಮರುವರ್ಷವೋ ನಮ್ಮ ಶಾಲೆ ಮಯ್ಯರ ಮನೆಯ ಹಿಂದಿನ ಹಾಡಿಯ ದಕ್ಷಿಣ ದಿಕ್ಕಿಗೆ ಇರುವ ಜಡ್ಡಿನ ಸಮತಟ್ಟು ಜಾಗದಲ್ಲಿ ಮಣ್ಣಿನ ಗೋಡೆ, ಹುಲ್ಲು ಮಾಡಿನೊಂದಿಗೆ ಸ್ವತಂತ್ರವಾಯಿತು. ಅಲ್ಲಿಯೇ ಸುತ್ತ ಮುತ್ತ ಇರುವ ಗೋರಾಜಿ ಪ್ರಭಾಕರ ಹಾಲಂಬಿಯವರ ಮಕ್ಕಳು, ರಾಮಚಂದ್ರ ಹಂಜಾರರ ಮಕ್ಕಳು, ನಮ್ಮ ಚೇರಿಕೆಯ ರಾಮಣ್ಣ ಶೆಟ್ರ ಮಕ್ಕಳು, ಮೇಲ್ಚೇರಿಕೆ ಹೂವ ಹಾಂಡನ ಮಕ್ಕಳು, ಕೆಳಮನೆ ರಾಮಣ್ಣ ಶೆಟ್ರ ಮಕ್ಕಳು, ಉಪಾಯ್ದರಬೆಟ್ ಪರಮೇಶ್ವರ ಆಚಾರಿಯ ಮಕ್ಕಳೂ ಮೇಲ್ಚೇರಿಕೆ ಮಂಜುನಾಥ ಭಟ್ರ ಮಕ್ಕಳು, ಮೂಡಾರಿ ಅನಂತಯ್ಯ ಭಟ್ರ ಮಕ್ಕಳೂ, ಮುದೂರಿ ಸಾವಿತ್ರಮ್ಮನ ಮಕ್ಕಳೂ ಮುಂತಾಗಿ ಸುತ್ತಮುತ್ತ ಇರುವ ಹಳ್ಳಿಯ ಎಲ್ಲರು ಅದೇ ಶಾಲೆಯಲ್ಲಿ ಓದಿದವರು. ಅಂತೂ ನಾನು ಆ ಶಾಲೆಗೆ ಸೇರಿದಾಗ ಒಂದು ಹದಿನೈದು ಇಪ್ಪತ್ತರ ಅಂದಾಜು ಮಕ್ಕಳಿದ್ದರು. ಶಾಲೆಯಲ್ಲಿ ನಾಲ್ಕನೇ ತರಗತಿಯವರೆಗೆ ಇದ್ದರೂ ಎಲ್ಲಾ ಕ್ಲಾಸುಗಳ ಮಕ್ಕಳೂ, ಹುಡುಗ ಹುಡುಗಿಯರೂ ಒಟ್ಟಿಗೇ ಕುಳಿತುಕೊಳ್ಳುತ್ತಿದ್ದೆವು. ಆ ವರ್ಷ ಬಾಲಕೃಷ್ಣ ಶೆಟ್ರಿಗೆ ವರ್ಗವಾಗಿ ನಮ್ಮ ನೆರೆಮನೆಯ ತಮ್ಮಯ್ಯ ಭಟ್ರ ಮಗ ಸುಬ್ರಾಯ ಭಟ್ಟರೇ ನಮಗೆ ಮಾಸ್ಟರರಾಗಿ ಬಂದರು.
ಆ ವರ್ಷದ ಅಂತ್ಯದಲ್ಲಿ ನಾವು ನಮ್ಮ ಗೋರಾಜಿ ಮತ್ತು ಹತ್ತಿರದ ಕಾಸಾಡಿ ಶಾಲೆಯ ಮಕ್ಕಳು ಒಟ್ಟಿಗೇ ಸೇರಿ ಶಾಲೆಯ ವಾರ್ಷಿಕೋತ್ಸವ ಆಚರಿಸಿದೆವು. ಲೇಜಿಮ್ ಕೋಲಾಟದಲ್ಲಿ ಭಾಗವಸಿದ್ದುದಲ್ಲದೇ, ಒಂದು  ಸಾಮಾಜಿಕ ನಾಟಕದಲ್ಲಿ ಪಾರ್ಟು ಮಾಡಿದ ನೆನಪು ನನಗೆ ಇನ್ನೂ ಇದೆ. ಆ ನಾಟಕದಲ್ಲಿ ನನ್ನದು ಹಾಸ್ಯ ಪಾತ್ರ. ನನಗೆ ಒಂದು ಜುಟ್ಟು ಕಟ್ಟಿದ್ದರು. ನಾಟಕದಲ್ಲಿ ಒಂದು ಹುಡುಗಿಯನ್ನು ತಮಾಷೆ ಮಾಡುವ ದೃಶ್ಯ ಇತ್ತು. ಆಗ ಹೇಳುವ ಪದ್ಯ “ ಎಳೆಎಳೆ ಪ್ರಾಯದ ಹೆಣ್ಣು, ಹುಳಿಹುಳಿ ಮಾವಿನ ಹಣ್ಣು” ಅಂತ ಏನೋ ಒಂದಿತ್ತು. ಆ ಪಾತ್ರ ಎಲ್ಲರಿಗೂ ಮೆಚ್ಚುಗೆಯಾಯ್ತು. ನನಗೆ ಆ ನಾಟಕದಲ್ಲಿ ಪ್ರೈಸ್ ಕೂಡ ಕೊಟ್ಟಿದ್ದರು. ಒಟ್ಟಿಗೆ ಮೂರ್ನಾಲ್ಕು ಪ್ರೈಸ್. ಒಂದು ಪ್ರೈಸ್ ತೆಗೆದುಕೊಂಡು ಒಳಗೆ ಬರುವಷ್ಟರಲ್ಲೇ ಇನ್ನೊಂದು ಪ್ರೈಸ್ ಗೆ ಕರೆದರು. ಮೊದಲ ಪ್ರೈಸನ್ನು ಒಳಗೆ ಬಂದು ಮೂಲೆಯಲ್ಲಿದ್ದ ಒಂದು ಚೀಲಕ್ಕೆ ಹಾಕಿ ಪುನಹ ಓಡಿದೆ. ಗಡಿಬಿಡಿಯಲ್ಲಿ ನನ್ನ ಪ್ರೈಸನ್ನು ಹಾಕಿದ್ದು ಬೇರೆಯವರ ಚೀಲದಲ್ಲಿ. ಪ್ರೈಸ್ ಅಂದರೆ ಸೋಪಿನ ಬಾಕ್ಸೊ, ಪ್ಲಾಸ್ಟಿಕ್ ಲೋಟವೋ ಏನೋ ಒಂದು. ಆದರೆ ನನಗೆ ಅದೆ ಚಿನ್ನ. ನಾಲ್ಕು ಜನರ ಎದುರು ಕೊಟ್ಟದ್ದಲ್ಲವೇ?  ಮನೆಗೆ ಬಂದು ನೋಡಿದರೆ ಪ್ರೈಸ್ ಯಾವುದೂ ಇಲ್ಲ. ನಾನು ಗಡಿಬಿಡಿಯಲ್ಲಿ ಹಾಕಿದ್ದು ಯಾರೊ ಬೇರೆಯವರ ಚೀಲಕ್ಕೆ. ಹೊಟ್ಟೆಯೆಲ್ಲ ಉರಿದು ಹೋಯಿತು.
ಅಂತೂ ಆ ಶಾಲೆಯ ಮಣ್ಣಿನ ಗೋಡೆ ಹುಲ್ಲಿನ ಮಾಡು ಮುಂದಿನ ಮಳೆಗಾಲದಲ್ಲಿ ಬಿದ್ದು ಹೋಗುತ್ತದೆ ಎನ್ನುವ ಹಾಗಿದ್ದು, ಮುಂದಿನ ವರ್ಷ ಹುಲ್ಲು ಹೊದೆಸುವುದೂ ಕಷ್ಟವಾಗಿ ಅಲ್ಲಿ ಕಾಲ ಕಳೆಯುವುದು ಕಷ್ಟ ಎಂಬ ಸ್ಥಿತಿ ಬಂತು. ಹಾಗಾಗಿ ಊರಿನ  ಕೆಲವು ಗಣ್ಯರೊಡನೆ  ಚರ್ಚಿಸಿ, ನಮ್ಮ ಶಾಲೆಯು ಮಳೆಗಾಲಕ್ಕೆ ಮುಂಚೆ, ಮುದೂರಿ ಈಶ್ವರ ದೇವಸ್ಥಾನದ ಹೊರಪೌಳಿಗೆ ಸ್ಥಳಾಂತರವಾಯಿತು. ಹಾಗಾಗಿ ನಮ್ಮದು ಗೋರಾಜಿ ಶಾಲೆ, ಹೋಗಿ ಮುದೂರಿ ಶಾಲೆ ಅಂತ ಆಯಿತು. ನಾವೇ ಶಾಲೆಯ ಬೆಂಚುಗಳನ್ನು, ಮಾಸ್ಟರರ ಟೇಬಲ್ ಕುರ್ಚಿಗಳನ್ನು  ಹೊತ್ತು ಸಾಗಿಸಿದೆವು. ನಾಲ್ಕಾರು ಬೆಂಚು, ಒಂದು ಟೇಬಲ್ಲು, ಒಂದು ಕುರ್ಚಿ, ಒಂದು ದೊಡ್ಡ ಕರಿ ಹಲಗೆ, ಒಂದು ಕಪಾಟು ಇಡಲಿಕ್ಕೆ ಎಷ್ಟು ಜಾಗ ಬೇಕು?. ಅಷ್ಟೇ ನಮ್ಮ ಶಾಲೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಕಾಣದಿರಲಿ ಎಂದು ಒಂದು ದಿಡ್ಕಿಯನ್ನು ಮಾಡಿಸಿದ್ದರು. ಅಂತೂ ಅಲ್ಲಿ ನಾಲ್ಕನೆಯ ಕ್ಲಾಸಿನವರೆಗೆ ಓದಿ ಐದನೇಯ ಕ್ಲಾಸಿಗೆ ಹಾಲಾಡಿ ಶಾಲೆಗೆ ಸೇರಿದೆ.
ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುವಾಗ ನಾನು ಮನೆಯಲ್ಲಿ ಹಗಲು ಇರುತ್ತಿದ್ದುದು ಕಡಿಮೆ. ಮೇಲೆ ಉದುರಿ ಹೋಗದಂತೆ ಬುಜಕ್ಕೆ ಲಾಡಿ ಇರುವ ದೊಗಲೆ ಚಡ್ಡಿಯನ್ನು ಹಾಕಿಕೊಂಡು ಆಚೆಮನೆ ತಮ್ಮಯ್ಯ ಭಟ್ರ ಮನೆ, ಪಕ್ಕದಲ್ಲಿರುವ ಶಂಕ್ರಾಚಾರಿಯ ಮನೆ, ಬೈಲಿನ ಬದಿಯಲ್ಲಿರುವ ರಾಮಣ್ಣ ಶೆಟ್ರ ಮನೆ, ಕೊಮೆ ಬಚ್ಚಿಯ ಮನೆ ಹೀಗೆ ಊರಲ್ಲೆಲ್ಲಾ ಓಡಾಡುತ್ತಿದ್ದೆ. ಎಲ್ಲಿಗೂ ಹೋಗಲು ಮನಸ್ಸಾಗದೇ ಇದ್ದರೆ ಸೀದಾ ಮನೆಯ ಎದುರು ಗದ್ದೆಯ ಆಚೆಯಿರುವ ಶೇಡಿ ಗುಡ್ಡಿಗೋ, ಅದರಾಚೆ ಸ್ವಲ್ಪ ದೂರದಲ್ಲಿರುವ ಹರಿನ್ ಗುಡ್ದೆ ಎಂಬ ವಿಶಾಲವಾದ ಗುಡ್ದೆಗೋ, ಮೇಲೆ ಹಕ್ಕಲಿನ ಗೋವೆ ಮರಗಳ ತಾಣಕ್ಕೋ ಅದೂ ಅಲ್ಲದಿದ್ದರೆ ಮೇಲು ಗದ್ದೆಯ ತುದಿಯಲ್ಲಿರುವ ಕೆರೆಯ ಬುಡಕ್ಕೋ ಹೋಗಿ ಆಟ ಆಡಿ ಸಮಯ ಕಳೆಯುತ್ತಿದ್ದೆ.
ಮಳೆಗಾಲದಲ್ಲಿ ಶಾಲೆಯ ರಜೆಯ ಅವಧಿಯಲ್ಲಿ ಅಕ್ಕನ ಮಕ್ಕಳು “ಹಾಲಾಡಿ ಅಪ್ಪಯ್ಯ”ನ ಮನೆ ಎಂದು ನಮ್ಮಲ್ಲಿಗೆ ಬಂದರೆ, ನಮ್ಮದು ಜಮದಗ್ನಿ ಎಂಬ ಬೆಟ್ಟದ ತಾವಿಗೋ,  ನಾಗರ್ತಿ ಎಂಬ ನಾಗಬನ ಇರುವ ಕಾಡಿನ ಸುಂದರ ತಾಣಕ್ಕೋ, ಹರಿನ್ ಗುಡ್ಡೆಯ ನೀರಿನ ತೊರೆ ಇರುವ ಜಾಗಕ್ಕೋ ಹೋಗಿ ಚಾರಣ ಆಗುತ್ತಿತ್ತು, ಬೆಳಿಗ್ಗೆ ಹೋದರೆ  ದಿನವಿಡೀ ಅಲ್ಲಿ ಕಳೆದು ಸಂಜೆ ಮನೆಗೆ ಬರುತ್ತಿದ್ದೆವು. ಆ ತಿರುಗಾಟ, ಒಡನಾಟ, ಬಾಲ್ಯದ ನೆನಪು ಅತೀ ಮಧುರವಾದದ್ದು.

(ಮುಂದುವರಿಯುವುದು)

1 ಕಾಮೆಂಟ್‌: